×
Ad

ಲೋಕ ಅದಾಲತ್‍ನಲ್ಲಿ ಪರಿಹಾರವಾಗಿ ನೀಡಿದ್ದ ಚೆಕ್ ಬೌನ್ಸ್: 80 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ

Update: 2023-10-03 20:03 IST

ಚಿತ್ರ-  PTI

ಬೆಳಗಾವಿ, ಅ.3: ಲೋಕ ಅದಾಲತ್‍ನಲ್ಲಿ ಪರಿಹಾರವಾಗಿ ನೀಡಿದ್ದ ಚೆಕ್ ಬೌನ್ಸ್ ಆದ ಪ್ರಕರಣದ ವಿಚಾರಣೆ ನಡೆಸಿದ ಬೆಳಗಾವಿಯ 5ನೆ ಜೆಎಂಎಫ್‍ಸಿ ನ್ಯಾಯಾಲಯ ತಪ್ಪಿತಸ್ಥ ಮಹಿಳೆಗೆ 80 ಲಕ್ಷ ರೂ. ದಂಡ ವಿಧಿಸಿದೆ.

ಬೆಳಗಾವಿ ನಗರದ ಶಹಾಪುರದ ನಿವಾಸಿಯಾದ ಮಹಿಳೆ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಶ್ರೀ ಬಸವೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ನಿಂದ 2012ರಲ್ಲಿ 35 ಲಕ್ಷ ರೂ.ಸಾಲ ಪಡೆದಿದ್ದರು. ಆದರೆ, ಅವರು ಸಾಲ ಮರುಪಾವತಿ ಮಾಡದ ಕಾರಣ ಸಹಕಾರಿ ಬ್ಯಾಂಕ್ ನ್ಯಾಯಾಲಯದ ಮೊರೆ ಹೋಗಿತ್ತು.

ಬಳಿಕ ಲೋಕ ಅದಾಲತ್‍ನಲ್ಲಿ ಸಾಲ ಮರುಪಾವತಿಗೆ ಒಪ್ಪಿದ್ದ ಮಹಿಳೆ 40.15 ಲಕ್ಷ ರೂ. ಮೊತ್ತದ ಚೆಕ್ ನೀಡಿದ್ದರು, ಚೆಕ್ ನಗದಿಗಾಗಿ ಸಂಬಂಧಿತ ಬ್ಯಾಂಕ್‍ಗೆ ಸಲ್ಲಿಸಿದಾಗ ಹಣ ಇಲ್ಲದ ಕಾರಣ ಚೆಕ್ ತಿರಸ್ಕøತಗೊಂಡಿತ್ತು.

ಈ ಬಗ್ಗೆ ಮಹಿಳೆಗೆ ಮಾಹಿತಿ ನೀಡಿದಾಗ ಅವರು ಮತ್ತೊಮ್ಮೆ ಚೆಕ್ ನಗದೀಕರಣಕ್ಕೆ ಕಳಿಸುವಂತೆ ಹೇಳಿದ್ದರು. ಆದರೆ, ಎರಡನೇ ಬಾರಿಯೂ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ಮಹಿಳೆಗೆ ನೋಟಿಸ್ ನೀಡಿದರೂ ಹಣ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾಲ ಕೊಟ್ಟಿದ್ದ ಸಹಕಾರಿ ಬ್ಯಾಂಕ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು.

2015ರಲ್ಲಿ ಪುನಃ ಲೋಕ ಅದಾಲತ್‍ನಲ್ಲಿ ರಾಜೀ ಸಂಧಾನಕ್ಕೆ ಒಪ್ಪಿಕೊಂಡಿದ್ದ ಮಹಿಳೆ, 49 ಲಕ್ಷ ರೂ. ಪಾವತಿಸುವುದಾಗಿ ಒಪ್ಪಿದ್ದರು, ಆದರೆ, ಹಣ ಪಾವತಿಸಿರಲಿಲ್ಲ. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಇದೀಗ 80 ಲಕ್ಷ ದಂಡ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News