×
Ad

ಮಾ.7ರಂದು ರಾಜ್ಯ ಬಜೆಟ್ ಮಂಡನೆ : ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2025-02-17 15:09 IST

ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ವಿಧಾನ ಮಂಡಲದ ಜಂಟಿ ಅಧಿವೇಶನವು ಮಾ.3ರಿಂದ ಪ್ರಾರಂಭವಾಗಲಿದ್ದು, ಅಂದು ರಾಜ್ಯಪಾಲರು ಉಭಯ ಸದನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಂಗಳವಾರದಿಂದ (ಮಾ.4ರಿಂದ 6ರ ವರೆಗೆ) ಗುರುವಾರದ ವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆದು, ಮಾ.7ರಂದು, 2025-2026ನೇ ಸಾಲಿನ ಆಯವ್ಯಯವನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಯವ್ಯಯದ ಮೇಲೆ ಚರ್ಚೆ ನಡೆದು ಉತ್ತರವನ್ನು ಮಾರ್ಚ್ ತಿಂಗಳ ಕೊನೆಯಲ್ಲಿ ನೀಡಲಾಗುವುದು. ಅಧಿವೇಶನ ಎಷ್ಟು ದಿನದ ವರೆಗೆ ನಡೆಸಬೇಕೆಂದು ಸದನ ಕಲಾಪ ಸಲಹಾ ಸಮಿತಿ(ಬಿಎಸ್‍ಸಿ)ಯಲ್ಲಿ ತೀರ್ಮಾನ ಮಾಡಲಾಗುವುದು ಎಂದರು.

ಸರಕಾರ ರೈತರ ಹಿತವನ್ನು ಕಾಪಾಡುವುದರಲ್ಲಿ ಹಿಂದೆ ಬಿದ್ದಿಲ್ಲ: ವಿವಿಧ ಇಲಾಖೆಗಳೊಂದಿಗೆ ಆಯವ್ಯಯ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಇಂದು ರೈತ ಸಂಘಟನೆಯ ಮುಖಂಡರೊಂದಿಗೆ ಸಭೆ ನಡೆಸಿದ್ದು, ಅವರ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ತಯಾರಿಸುವಾಗ ಇತಿಮಿತಿಯೊಳಗೆ ಸಲಹೆಗಳನ್ನು ಸೇರ್ಪಡೆ ಮಾಡಲಾಗುವುದು. ರಾಜ್ಯ ಸರಕಾರ ರೈತರ ಹಿತವನ್ನು ಕಾಪಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಯಾವತ್ತೂ ರೈತರ ಪರವಾಗಿದ್ದು, ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಇರಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಬೆಲೆಯೇರಿಕೆ ತಗ್ಗಿಸಲು ಪ್ರಯತ್ನ: ಬೆಲೆಯೇರಿಕೆ ಹೆಚ್ಚಾಗಿರುವುದರಿಂದ ರಾಜ್ಯ ಬಜೆಟ್ ಮೇಲೆ ನಿರೀಕ್ಷೆಗಳು ಕೂಡ ಹೆಚ್ಚಾಗಿವೆ ಎಂದು ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಕೇಂದ್ರ ಸರಕಾರ ಬೆಲೆ ಏರಿಕೆ ಕುರಿತು ಹೆಚ್ಚಿನ ಒತ್ತು ನೀಡಬೇಕು. ರಾಜ್ಯ ಸರಕಾರವು ಬೆಲೆಯೇರಿಕೆ ತಗ್ಗಿಸಲು ಸಾಧ್ಯವಾದಷ್ಟೂ ಪ್ರಯತ್ನ ಮಾಡಲಿದೆ ಎಂದರು.

ಮೆಟ್ರೋ ಪ್ರಯಾಣ ದರ ನಿಗದಿ: ಮೆಟ್ರೋ ರೈಲಿನ ಪ್ರಯಾಣ ದರ ನಿಗದಿ ಮಾಡುವುದು ಕೇಂದ್ರ ಸರಕಾರ ನೇಮಕ ಮಾಡಿರುವ ಸಮಿತಿ. ಮೆಟ್ರೋ ಸ್ವಾಯತ್ತ ಸಂಸ್ಥೆಯಾದರೂ, ಸಮಿತಿಯಲ್ಲಿ ಇಬ್ಬರು ಕೇಂದ್ರ ಸರಕಾರದ ಪ್ರತಿನಿಧಿಗಳು ಹಾಗೂ ಇಬ್ಬರು ರಾಜ್ಯ ಸರಕಾರದ ಪ್ರತಿನಿಧಿಗಳಿರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಲೆ ನಿಗದಿ ಮಾಡಲು ರಾಜ್ಯ ಸರಕಾರ ಪ್ರಸ್ತಾವನೆ ನೀಡುತ್ತದೆ. ಬೆಲೆ ನಿಗದಿ ಮಾಡುವುದು ಸಮಿತಿ. ಆ ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡುವುದು ಕೇಂದ್ರ ಸರಕಾರ. ಪ್ರಸ್ತುತ ತಮಿಳುನಾಡು ರಾಜ್ಯದ ನಿವೃತ್ತ ನ್ಯಾಯಾಧೀಶರು ಸಮಿತಿಯ ಅಧ್ಯಕ್ಷರಾಗಿದ್ದಾರೆ ಎಂದು ಅವರು ತಿಳಿಸಿದರು.

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಅನ್ನಭಾಗ್ಯ ಯೋಜನೆಯ ಮೊತ್ತ ಐದು ತಿಂಗಳಿನಿಂದ ಹಾಗೂ ಗೃಹಲಕ್ಷ್ಮಿ ಯೋಜನೆಯ ಮೊತ್ತ ಮೂರು ತಿಂಗಳಿನಿಂದ ಜಮಾ ಆಗದಿರುವುದಕ್ಕೆ ಕಾರಣವೇನು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಯಾವ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪಾವತಿಯಲ್ಲಿ ವಿಳಂಬವಾಗಿದ್ದರೆ ಪರಿಶೀಲಿಸಿ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಗಳಿಗೆ ನಾವು ಸಿದ್ಧರಾಗಿದ್ದು, ಹೈಕೋರ್ಟ್ ಸೂಚನೆ ಮೇರೆಗೆ ಚುನಾವಣೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ನಾಯಕತ್ವ ಬದಲಾವಣೆ, ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಕುರಿತು ಪಕ್ಷದ ಹೈ ಕಮಾಂಡ್ ತೀರ್ಮಾನಿಸಲಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News