ಜ.6ರಂದು ದೇವರಾಜ ಅರಸು ದಾಖಲೆ ಸರಿಗಟ್ಟಲಿರುವ ʼಮುಖ್ಯಮಂತ್ರಿʼ ಸಿದ್ದರಾಮಯ್ಯ
ಸಂಭ್ರಮಾಚರಣೆಗೆ ಅಭಿಮಾನಿಗಳು ಸಜ್ಜು
ಸಿದ್ದರಾಮಯ್ಯ(PTI)/ದೇವರಾಜ ಅರಸು
ಬೆಂಗಳೂರು : ಸಿದ್ದರಾಮಯ್ಯ ಅವರು ಜ.7ರಂದು ಕರ್ನಾಟಕದ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದು, ಸಂಭ್ರಮಾಚರಣೆಗೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
ದೇವರಾಜ ಅರಸು ಅವರು ಈವರೆಗಿನ ದೀರ್ಘಾವಧಿ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾಗಿದ್ದಾರೆ. ಅವರು ಎರಡು ಅವಧಿಗಳಲ್ಲಿ ಒಟ್ಟು 2,792 ದಿನಗಳು ಅಥವಾ 7.6 ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು.
ಸೋಮವಾರ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ 2,784 ದಿನಗಳನ್ನು ಪೂರ್ಣಗೊಳಿಸಿದ್ದಾರೆ. ಇದರಲ್ಲಿ ಅವರ ಮೊದಲ ಅಧಿಕಾರಾವಧಿಯ (2013ರಿಂದ 2018) 1,829 ದಿನಗಳು ಮತ್ತು ಪ್ರಸಕ್ತ ಅಧಿಕಾರಾವಧಿಯ ದಿನಗಳು ಸೇರಿವೆ. ಜನವರಿ 6ರಂದು ಅರಸು ಅವರ ದಾಖಲೆಯನ್ನು ಸರಿಗಟ್ಟಲಿರುವ ಅವರು ಮರುದಿನ ಅದನ್ನು ಮುರಿಯಲಿದ್ದಾರೆ.
ಸಿದ್ದರಾಮಯ್ಯನವರ ಅಭಿಮಾನಿಗಳು ಮತ್ತು ವಿವಿಧ ಸಂಘಟನೆಗಳು ಸಂಭ್ರಮಾಚರಣೆಗೆ ಯೋಜಿಸುತ್ತಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೊಂದಿಗೆ ನಾಯಕತ್ವ ಹಗ್ಗಜಗ್ಗಾಟದ ನಡುವೆಯೇ ಈ ಸಂಭ್ರಮಾಚರಣೆಗಳು ಸಿದ್ದರಾಮಯ್ಯನವರ ರಾಜಕೀಯ ಬೆಂಬಲದ ಬುನಾದಿಯಾದ ‘ಅಹಿಂದ’ವನ್ನು ಹುರಿದುಂಬಿಸುವ ಉದ್ದೇಶವನ್ನೂ ಹೊಂದಿರಲಿವೆ.
ಸಿದ್ದರಾಮಯ್ಯ ಅವರ ಸಾಧನೆಯನ್ನು ಆಚರಿಸಲು ಅಹಿಂದ ಗುಂಪೊಂದು ಜ.6ರಂದು ಬೆಂಗಳೂರಿನಲ್ಲಿ ನಾಟಿ ಕೋಳಿ ಊಟವನ್ನು ಆಯೋಜಿಸುತ್ತಿದೆ. ಈ ಔತಣಕೂಟದ ಪೋಸ್ಟರ್‌ನ್ನು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಅನಾವರಣಗೊಳಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಸಮುದಾಯಗಳ ಒಕ್ಕೂಟವೂ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದೆ.
‘ಅಹಿಂದ ಸಮಾವೇಶವನ್ನು ಆಯೋಜಿಸುವಂತೆ ನಾವು ಯಾರನ್ನೂ ಕೇಳಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೆವಪ್ಪ ಅವರು, ಆದರೆ ವಿವಿಧ ಸಮುದಾಯಗಳು ತಮ್ಮ ಸಮಾವೇಶಗಳನ್ನು ನಡೆಸಲು ಮುಕ್ತವಾಗಿವೆ ಎಂದರು.
ಸಿದ್ದರಾಮಯ್ಯ ರಾಜ್ಯಾದ್ಯಂತ ಬೆಂಬಲವನ್ನು ಹೊಂದಿದ್ದಾರೆ ಎಂದು ಹೇಳಿದ ಅವರು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎನ್ನುವುದು ಸಂಘಟನೆಗಳು,ಸಾಮಾಜಿಕ ಕಾರ್ಯಕರ್ತರು ಮತ್ತು ಜನಸಾಮಾನ್ಯರ ಅಭಿಪ್ರಾಯವಾಗಿದೆ. ಸಿದ್ದರಾಮಯ್ಯ ಪರವಾಗಿರುವ ಈ ಗುಂಪುಗಳು 2023ರಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದವು ಎಂದರು.