ಸರಕಾರದ ವತಿಯಿಂದಲೇ ‘ಆಂಬ್ಯುಲೆನ್ಸ್ ಸೇವೆ’ಗೆ ಸಿದ್ಧತೆ : ಸಚಿವ ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಬೆಂಗಳೂರು : ಸರಕಾರದ ವತಿಯಿಂದಲೇ ರಾಜ್ಯಾದ್ಯಂತ ಆಂಬ್ಯುಲೆನ್ಸ್ ಸೇವೆ ನಿರ್ವಹಣೆ ಮಾಡಲು ಆರೋಗ್ಯ ಇಲಾಖೆ ಸಕಲ ಸಿದ್ಧತೆ ನಡೆಸುತ್ತಿದ್ದು, ಸದ್ಯದಲ್ಲಿಯೇ ಸೇವೆ ಪ್ರಾರಂಭಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗಳವಾರ ಪ್ರಕಟನೆ ಹೊರಡಿಸಿರುವ ಅವರು, ಪ್ರಸ್ತುತ 108 - ಆರೋಗ್ಯ ಕವಚ ಆಂಬುಲೆನ್ಸ್ ಸೇವೆಯನ್ನು ಒಡಂಬಡಿಕೆ ಮಾದರಿಯಲ್ಲಿ ನಿರ್ವಹಣೆ ಮಾಡುತ್ತಿದ್ದು, ಸೇವೆಯ ಕುರಿತು ಸಾರ್ವಜನಿಕರಿಂದ ಹಲವಾರು ಆಕ್ಷೇಪಣೆಗಳು, ಸಮಸ್ಯೆಗಳು ದಾಖಲಾಗಿವೆ. ಹೀಗಾಗಿ ಸರಕಾರವೇ ಆಂಬುಲೆನ್ಸ್ ಸೇವೆಯನ್ನು ನೀಡಲಿದೆ. ಅವಶ್ಯಕವಾದ ತಂತ್ರಜ್ಞಾನ, ಕಮಾಂಡ್ ಕಂಟ್ರೋಲ್ ಸೆಂಟರ್ ಬೇಕಾದ ಮಾನವ ಸಂಪನ್ಮೂಲ ಸೇರಿದಂತೆ ಎಲ್ಲ ಸಿದ್ಧತೆಗಳು ಅಂತಿಮ ಹಂತ ತಲುಪಿದೆ ಎಂದಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳಡಿಯಲ್ಲಿ ಒಟ್ಟಾರೆ 1,841 ಆಂಬ್ಯುಲೆನ್ಸ್ ಲಭ್ಯವಿದ್ದು, ಇದರಲ್ಲಿ 108-ಆರೋಗ್ಯ ಕವಚ ಕಾರ್ಯಕ್ರಮದಡಿಯಲ್ಲಿ ಒಟ್ಟು 715 ಆಂಬ್ಯುಲೆನ್ಸ್ ಗಳು ಹಾಗೂ ರಾಜ್ಯ ವಲಯದ 1,126 ಆಂಬ್ಯುಲೆನ್ಸ್ ಗಳು ಲಭ್ಯವಿದೆ. ಮಾನದಂಡಗಳನ್ವಯ ಹಾಲಿ ಜನಸಂಖ್ಯೆಗೆ 813 ಆಂಬ್ಯುಲೆನ್ಸ್ ಗಳು ಅಗತ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.
108-ಆರೋಗ್ಯ ಕವಚ ನಿರ್ವಹಣೆಗೆ ವಾರ್ಷಿಕ 162.40 ಕೋಟಿ ರೂ. ಅನುದಾನ ಅಗತ್ಯವಿದ್ದು, ಸರಕಾರದಿಂದ 180 ಕೋಟಿ ರೂ.ಗಳ ಅನುದಾನವು 108-ಆರೋಗ್ಯ ಕವಚ ಲೆಕ್ಕ ಶೀರ್ಷಿಕೆಯಡಿಯಲ್ಲಿ ಅನುಮೋದನೆಯಾಗಿದೆ. ಹಾಲಿ ಇರುವ 108-ಆರೋಗ್ಯ ಕವಚ ಸೇವೆಯ ಸೇವಾದಾರರಿಂದ ಸರಕಾರ ವಹಿಸಿಕೊಳ್ಳುವ ಸಮಯದಲ್ಲಿ ಚಿಕ್ಕಪುಟ್ಟ ಸಮಸ್ಯೆಗಳು ಇದ್ದರೂ, ಸಾರ್ವಜನಿಕರ ಸೇವೆಗೆ ಯಾವ ಸಮಸ್ಯೆಯೂ ಇರುವುದಿಲ್ಲ. ಇದು ತುರ್ತು ಆರೋಗ್ಯ ಸೇವೆಯಾಗಿರುವುದಿರಂದ ಇಲಾಖೆಯು ಜಾಗರೂಕತೆಯಿಂದ ನಿರ್ವಹಣೆ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.