ಆಡಳಿತ ಸುಧಾರಣಾ ಆಯೋಗದ 10ನೇ ವರದಿ ಸಲ್ಲಿಕೆ
ಸುಧಾರಣಾ ಮೇಲ್ವಿಚಾರಣಾ ಘಟಕ ಸ್ಥಾಪಿಸಲು ಶಿಫಾರಸು : ಆರ್.ವಿ.ದೇಶಪಾಂಡೆ
ಬೆಂಗಳೂರು : ಆಡಳಿತ ಸುಧಾರಣಾ ಆಯೋಗ-2ರಲ್ಲಿನ ಎಲ್ಲ ಶಿಫಾರಸುಗಳ ಪಾಲನೆಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಪ್ರತ್ಯೇಕ ‘ಸುಧಾರಣಾ ಮೇಲ್ವಿಚಾರಣಾ ಘಟಕ'ವನ್ನು ಸ್ಥಾಪಿಸುವುದು ಸೇರಿದಂತೆ ಒಟ್ಟು 354 ಶಿಫಾರಸುಗಳನ್ನು ಮಾಡಲಾಗಿದೆ ಎಂದು ಆಡಳಿತ ಸುಧಾರಣಾ ಆಯೋಗ-2ರ ಅಧ್ಯಕ್ಷರೂ ಆಗಿರುವ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವರದಿ ಸಲ್ಲಿಕೆ ಬಳಿಕ ಇಲ್ಲಿನ ವಿಕಾಸಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಡಳಿತ ಸುಧಾರಣಾ ಆಯೋಗ-1 ಮತ್ತು ಆಯೋಗ-2 ಒಟ್ಟು 10 ವರದಿಗಳ ಮೂಲಕ 42 ಇಲಾಖೆಗಳಿಗೆ ಸಂಬಂಧಿಸಿದಂತೆ 6 ಸಾವಿರಕ್ಕೂ ಹೆಚ್ಚು ಶಿಫಾರಸುಗಳನ್ನು ನೀಡಿವೆ. ನಾನು 2024ನೆ ಮೇ ತಿಂಗಳಿನಲ್ಲಿ 8ನೆ ವರದಿಯನ್ನು 2025ನೆ ಅಕ್ಟೋಬರ್ ತಿಂಗಳಿನಲ್ಲಿ 9ನೆ ವರದಿಯನ್ನು ಮತ್ತು ಡಿಸೆಂಬರ್ ನಲ್ಲಿ 10ನೆ ವರದಿಯನ್ನು ಒಟ್ಟಾರೆ 3 ವರದಿಗಳನ್ನು ಸಲ್ಲಿಸಿದ್ದೇನೆ. ಈ ಮೂರು ವರದಿಗಳು ಒಟ್ಟು 992 ಶಿಫಾರಸುಗಳನ್ನು ಒಳಗೊಂಡಿವೆ ಎಂದರು.
10ನೆ ವರದಿಯನ್ನು ಸಲ್ಲಿಸುವುದರೊಂದಿಗೆ ಆಡಳಿತ ಸುಧಾರಣಾ ಆಯೋಗ-2 ತನ್ನ ಕಾರ್ಯವನ್ನು ಪೂರ್ಣಗೊಳಿಸಿದೆ. ಸುಧಾರಣೆಗಳ ಪ್ರಯೋಜನಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡಲು ಮತ್ತು ಆಡಳಿತ ಸುಧಾರಣೆಯ ನಿರಂತರತೆಯನ್ನು ಕಾಪಾಡಲು ಸರಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಆಯೋಗದ ಶಿಫಾರಸುಗಳ ಅನುಷ್ಠಾನದ ಬಗ್ಗೆ ಇಲಾಖಾವಾರು ತ್ರೈಮಾಸಿಕ ಪರಿಶೀಲನೆಯನ್ನು ಕಡ್ಡಾಯಗೊಳಿಸಬೇಕು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ‘ವಾರ್ಷಿಕ ಉನ್ನತ ಮಟ್ಟದ ಹೊಣೆಗಾರಿಕೆ’ಯನ್ನು ನಿಗದಿಪಡಿಸಲಾಗಿದೆ. ಇದರಿಂದ ಇಲಾಖೆಗಳು ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಪ್ರಮುಖ ಶಿಫಾರಸುಗಳು:
* ಶೂನ್ಯ ಅಥವಾ ಅತ್ಯಲ್ಪ ಹಂಚಿಕೆ ಹೊಂದಿರುವ ಅಥವಾ ಕೇವಲ ಲೆಕ್ಕಪತ್ರ/ಸಾಲ ನಿರ್ವಹಣೆ ಉದ್ದೇಶಕ್ಕಾಗಿ ಇರುವ ಸುಮಾರು ಒಂದು ಸಾವಿರ ನಿಷ್ಕ್ರಿಯ ಯೋಜನೆಗಳನ್ನು ಮುಕ್ತಾಯಗೊಳಿಸುವುದು ಅಥವಾ ವಿಲೀನಗೊಳಿಸುವುದು.
* 1 ಕೋಟಿ ರೂ.ಗಳಿಗಿಂತ ಕಡಿಮೆ ಅನುದಾನ ಹೊಂದಿರುವ 280 ಲೆಕ್ಕ ಶೀರ್ಷಿಕೆಗಳು/ಯೋಜನೆಗಳ ಜಂಟಿ ಪರಿಶೀಲನೆಯನ್ನು ಕಾಲಮಿತಿಯೊಳಗೆ ಕೈಗೊಂಡು, ಕಾರ್ಯಸಾಧ್ಯವಲ್ಲದ ಯೋಜನೆಗಳನ್ನು ಮುಚ್ಚುವುದು ಅಥವಾ ವಿಲೀನಗೊಳಿಸುವುದು.
* ಇಲಾಖೆಗಳ ಕಾರ್ಯನಿರ್ವಹಣೆಯ ಅಗತ್ಯತೆಗಳಿಗೆ ಅನುಗುಣವಾಗಿ, ಬಳಕೆಯಲ್ಲಿಲ್ಲದ ಗುಮಾಸ್ತ ಹುದ್ದೆಗಳನ್ನು ತಾಂತ್ರಿಕ ಅಥವಾ ಬಹು-ಕಾರ್ಯ ನಿರ್ವಹಣಾ ಹುದ್ದೆಗಳನ್ನಾಗಿ ಪರಿವರ್ತಿಸುವುದು.
* ವೃಂದ ಮತ್ತು ನೇಮಕಾತಿ ನಿಯಮಗಳ ಪರಿಶೀಲನೆಯ ಮೂಲಕ ಅಪ್ರಸ್ತುತ ಮತ್ತು ಕಾರ್ಯನಿರ್ವಹಣೆಗೆ ಅಗತ್ಯವಿಲ್ಲದ ಹುದ್ದೆಗಳನ್ನು ರದ್ದುಪಡಿಸುವುದು.
* ಮಂಜೂರಾದ ಖಾಯಂ ಹುದ್ದೆಗಳಿದ್ದೂ ಅವು ಭರ್ತಿಯಾಗದೆ ಬಾಕಿ ಇರುವ ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ಹುದ್ದೆಗಳಲ್ಲಿ ಇನ್ನು ಮುಂದೆ ಹೊರಗುತ್ತಿಗೆ ನೇಮಕಾತಿಯನ್ನು ಸ್ಥಗಿತಗೊಳಿಸುವುದು.
* ಒಂದು ವರ್ಷಕ್ಕೂ ಹೆಚ್ಚು ಕಾಲ ಖಾಲಿ ಇರುವ ಮುಂಚೂಣಿ ಹುದ್ದೆಗಳನ್ನು ಆದ್ಯತೆಯ ಮೇಲೆ ಭರ್ತಿ ಮಾಡುವುದು.