‘ವಿಬಿ- ಜಿ ರಾಮ್ ಜಿ ಕಾಯ್ದೆ ಅನುಷ್ಠಾನ ಮುಂದೂಡಿ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ’ : ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ
File Photo: PTI
ಬೆಂಗಳೂರು : ವಿಕಸಿತ ಭಾರತ-ಉದ್ಯೋಗ ಮತ್ತು ಜೀವನೋಪಾಯ ಭರವಸೆ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ)ಕಾಯ್ದೆಯನ್ನು ಅನುಷ್ಠಾನ ಮಾಡುವುದನ್ನು ತಾತ್ಕಾಲಿಕವಾಗಿ ಮುಂದೂಡಿ, ಅದರ ಸಾಧಕ-ಬಾಧಕಗಳ ಕುರಿತು ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?:
ವಿಬಿ-ಜಿ ರಾಮ್ ಜಿ ಕಾಯ್ದೆಯು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯ ಮೂಲ ಕಾಯ್ದೆಯ ಉದ್ದೇಶವನ್ನೇ ಹಾಳುಮಾಡುವ ಅಪಾಯ ಹೊಂದಿದೆ. ಹೊಸ ಕಾಯ್ದೆಯು ಉದ್ಯೋಗ ಭರವಸೆಯ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿದರೂ, ಅದಕ್ಕೆ ತಕ್ಕಂತಹ ಸಮರ್ಪಕ ಯೋಜನೆ ಅಥವಾ ಕೇಂದ್ರ ಸರಕಾರದ ಖಚಿತ ಅನುದಾನದ ಭರವಸೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಕಾಯ್ದೆಯು ಪ್ರತಿ ರಾಜ್ಯದ ‘ಅಧಿಸೂಚಿತ’ ಪ್ರದೇಶಗಳಿಗೆ ಸಂಬಂಧಿಸಿದಂತೆ ‘ನಿಯಮಿತ ಅನುದಾನ’ಕ್ಕೆ ಮಾತ್ರ ಕೇಂದ್ರ ಸರಕಾರದ ಆರ್ಥಿಕ ಹೊಣೆಗಾರಿಕೆಯನ್ನು ಮಿತಿಗೊಳಿಸುತ್ತದೆ. ಹೆಚ್ಚಿನ ರಾಜ್ಯಗಳಲ್ಲಿ ಕೇಂದ್ರ ಸರಕಾರವು ಆ ಅನುದಾನದ ಕೇವಲ ಶೇ.60ರಷ್ಟನ್ನು ಮಾತ್ರ ನೀಡುತ್ತದೆ. ಇದರ ಪರಿಣಾಮವಾಗಿ, 125 ದಿನಗಳ ಕಾನೂನು ಬದ್ಧ ಉದ್ಯೋಗ ಭರವಸೆ ಈಡೇರುವುದು ಕಷ್ಟ ಸಾಧ್ಯ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರಕಾರ ಅಧಿಸೂಚಿಸುವ ಹಾಗೂ ನಿಗದಿಪಡಿಸುವ ನಿಯಮಿತ ಅನುದಾನ ಮಿತಿಗೆ ಇದು ಒಳಪಟ್ಟಿರುತ್ತದೆ. ಇದು ಉದ್ಯೋಗ ಭರವಸೆಯ ಮೂಲ ತತ್ವವನ್ನೆ ದುರ್ಬಲಗೊಳಿಸುತ್ತಿದ್ದು, ನಿಜವಾದ ಬೇಡಿಕೆ ಇದ್ದರೂ ಅನೇಕ ಗ್ರಾಮ ಪಂಚಾಯತಿಗಳಿಗೆ ಹಣಕಾಸಿನ ಕೊರತೆ ಉಂಟಾಗುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ಹೊಸ ಕಾಯ್ದೆಯು ಪ್ರತಿ ವರ್ಷ “ವಸ್ತುನಿಷ್ಠ ಮಾನದಂಡಗಳ” ಆಧಾರದ ಮೇಲೆ ರಾಜ್ಯವಾರು ನಿಯಮಿತ ಅನುದಾನವನ್ನು ಕೇಂದ್ರ ಸರಕಾರವೆ ನಿಗದಿಪಡಿಸುವುದಾಗಿ ಹೇಳುತ್ತದೆ. ಆದರೆ ಈ ಮಾನದಂಡಗಳನ್ನು ಕಾಯ್ದೆಯಲ್ಲಿ ಸ್ಪಷ್ಟವಾಗಿ ಸೇರಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಮಿಕ ಬಜೆಟ್‍ಗಳನ್ನು ತಯಾರಿಸಿ, ಗ್ರಾಮಗಳಿಂದ ಉಂಟಾಗುವ ಬೇಡಿಕೆಯ ಆಧಾರದಲ್ಲಿ ಅನುದಾನ ನೀಡುವ ವಿಧಾನಕ್ಕೆ ಇದು ವಿರುದ್ಧವಾಗಿದೆ. ಪಿಎಂ ಗತಿ ಶಕ್ತಿ ಮಾಸ್ಟರ್ ಪ್ಲಾನ್‍ಗೆ ಹೊಂದಾಣಿಕೆ ಮಾಡುವ ಪ್ರಯತ್ನ ಇದಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಪ್ರಸಕ್ತ ಜಾರಿಯಲ್ಲಿರುವ ಮನರೇಗಾ ಚೌಕಟ್ಟಿನ ಅಡಿಯಲ್ಲಿ, ಪ್ರಮುಖ ರಾಜ್ಯಗಳು ಕೇಂದ್ರ-ರಾಜ್ಯಗಳ ನಡುವೆ ಶೇ.90:10 ಹಣಕಾಸು ಹಂಚಿಕೆ ವ್ಯವಸ್ಥೆಯನ್ನು ಅನುಸರಿಸುತ್ತಿವೆ. ಆದರೆ ಹೊಸ ಕಾಯ್ದೆಯು ಇದನ್ನು ಬಹುತೇಕ ರಾಜ್ಯಗಳಿಗೆ ಶೇ.60:40ಕ್ಕೆ ಬದಲಾಯಿಸಿದೆ. ಇದರಿಂದ ಕಾನೂನುಬದ್ಧ ಭರವಸೆಯಾಗಿ ಇದ್ದ ಯೋಜನೆ ಒಂದು ಸಾಮಾನ್ಯ ಯೋಜನೆಯಾಗಿ ಪರಿವರ್ತನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಜಿಎಸ್‍ಟಿ ಪರಿಹಾರ ಸಿಗದಿರುವುದು ಹಾಗೂ ತಾರತಮ್ಯಕರವಾದ ಹಣಕಾಸು ವಿಕೇಂದ್ರೀಕರಣದಿಂದ ಆರ್ಥಿಕ ಒತ್ತಡದಲ್ಲಿರುವ ರಾಜ್ಯಗಳ ಮೇಲೆ ಹೆಚ್ಚುವರಿ ಭಾರವನ್ನು ಹಾಕುತ್ತದೆ. ಈ ಬದಲಾವಣೆ ರಾಜ್ಯ ಸರಕಾರಗಳೊಂದಿಗೆ ಅರ್ಥಪೂರ್ಣ ಸಮಾಲೋಚನೆ ಇಲ್ಲದೆ ತರಲಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೊಸ ಕಾಯ್ದೆಯು ರಾಜ್ಯಕ್ಕೆ ನಿಗದಿಪಡಿಸಿದ ಮಾನದಂಡದ ಹಂಚಿಕೆಯ ಮೀರಿದ ಯಾವುದೆ ವೆಚ್ಚವನ್ನು ರಾಜ್ಯ ಸರಕಾರವೆ ಭರಿಸಬೇಕು ಎಂದು ಹೇಳುತ್ತದೆ. ಇದರಿಂದ ಕೇಂದ್ರ ನಿಗದಿಪಡಿಸಿದ ಮಿತಿಗಿಂತ ಹೆಚ್ಚಾದ ಬೇಡಿಕೆಗೆ ಸಂಬಂಧಿಸಿದಂತೆ ರಾಜ್ಯಗಳು ಶೇ. 100ರಷ್ಟು ಹೊಣೆಗಾರಿಕೆಯನ್ನು ಹೊರುವ ಪರಿಸ್ಥಿತಿ ಎದುರಾಗಬಹುದು. ಒಂದು ರಾಜ್ಯವು ನಿಗದಿತ ಅಥವಾ ಹೆಚ್ಚುವರಿ ವೆಚ್ಚವನ್ನು ಭರಿಸಲು ಅಸಮರ್ಥವಾದರೆ, ಉದ್ಯೋಗ ಪಡೆಯುವ ಹಕ್ಕು ಕೈ ತಪ್ಪುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿತ್ತನೆ ಮತ್ತು ಕೊಯ್ಲಿನ ಗರಿಷ್ಠ ಅವಧಿಯಲ್ಲಿ ಒಟ್ಟು 60 ದಿನಗಳ ಕಾಲ ಈ ಕಾಯ್ದೆಯಡಿ ಕೆಲಸಗಳನ್ನು ಕೈಗೊಳ್ಳಲಾಗುವುದಿಲ್ಲ ಎಂಬುದನ್ನು ರಾಜ್ಯಗಳು ಮುಂಚಿತವಾಗಿ ಅಧಿಸೂಚನೆ ಮಾಡಬೇಕಾಗಿದೆ. ಆ ಅವಧಿಯಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಬಹುದು ಎಂಬುದು ಸತ್ಯವಾದರೂ, ಇಂತಹ ಸಮಗ್ರ ನಿಷೇಧವು ಇನ್ನೂ ಕೂಲಿ ಉದ್ಯೋಗ ಅಗತ್ಯವಿರುವ ಜನರ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಆದಿವಾಸಿ ಮತ್ತು ದುರ್ಬಲ ವರ್ಗದವರಿಗೆ ಸಾಕಷ್ಟು ಕೃಷಿ ಕೆಲಸ ಸಿಗದಂತಾಗುತ್ತದೆ. ಇದರಿಂದಾಗಿ, ಜೀವನೋಪಾಯದ ಅಸ್ಥಿರತೆ ಹೆಚ್ಚಾಗಿ, ಕೂಲಿಗಾಗಿ ಕಾರ್ಮಿಕರು ನಗರ ಪ್ರದೇಶಗಳತ್ತ ವಲಸೆ ಹೋಗುತ್ತಾರೆ. ಸ್ಥಳೀಯವಾಗಿ ಅಗತ್ಯವಿರುವ ಗ್ರಾಮೀಣ ಆಸ್ತಿಗಳ ನಿರ್ಮಾಣದ ಮೇಲೆ ಕೇಂದ್ರೀಕೃತವಾಗಿರುವ ಮನರೇಗಾ ಮೂಲ ಉದ್ದೇಶದಿಂದ ದೂರ ಸರಿದು, ಗುತ್ತಿಗೆದಾರರ ನೇತೃತ್ವದ ಯೋಜನೆಗಳಿಗೆ ಉತ್ತೇಜನ ನೀಡುವ ಮಾದರಿಯತ್ತ ಸಾಗುತ್ತಿರುವಂತೆ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.
ಹೆಚ್ಚುವರಿ ತಂತ್ರಜ್ಞಾನ ಹಸ್ತಕ್ಷೇಪಗಳು ಅತ್ಯಂತ ಬಡ ಮತ್ತು ಡಿಜಿಟಲ್ ಸೌಲಭ್ಯಗಳಿಂದ ವಂಚಿತರಾದ ಗ್ರಾಮೀಣ ನಾಗರಿಕರನ್ನು, ವಿಶೇಷವಾಗಿ ದಲಿತ ಮತ್ತು ಆದಿವಾಸಿ ಸಮುದಾಯಗಳನ್ನು ಹೊರಗುಳಿಸಬಹುದಾದ ಅಪಾಯವಿದೆ. ಈ ಕಾಯ್ದೆಯನ್ನು ಏಕಪಕ್ಷೀಯವಾಗಿ ಹಾಗೂ ತುರ್ತಾಗಿ ಜಾರಿಗೆ ತರುವುದು ಸಂವಿಧಾನದ ಅನುಚ್ಛೇದಗಳು 258 ಮತ್ತು 280ಗಳಿಗೆ ವಿರುದ್ಧವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಉದ್ಯೋಗ ಖಾತರಿ ಕಾಯ್ದೆ ಕೇವಲ ಕಲ್ಯಾಣ ಯೋಜನೆಯಲ್ಲ, ಗ್ರಾಮ ಸ್ವರಾಜ್ಯ ಮತ್ತು ಅಂತ್ಯೋದಯದ ಪ್ರತೀಕವಾದ ಮಹಾತ್ಮ ಗಾಂಧಿಯವರ ಹೆಸರನ್ನು ಹೊಂದಿದೆ. ಕಾನೂನಿನಿಂದ ಅವರ ಹೆಸರು ತೆಗೆದದ್ದು ದುರಾದೃಷ್ಟಕರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.