ಕೋಗಿಲು ಒತ್ತುವರಿ ತೆರವು | ಕನ್ನಡಿಗರಿಗೆ ಮಾತ್ರ ಮನೆ, ಬೇರೆಯವರಿಗೆ ಇಲ್ಲ: ಝಮೀರ್ ಅಹ್ಮದ್ ಖಾನ್
ಝಮೀರ್ ಅಹ್ಮದ್ ಖಾನ್
ಬೆಂಗಳೂರು : ಕೋಗಿಲು ಬಳಿ ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಶೆಡ್‍ಗಳನ್ನು ನಿರ್ಮಿಸಿಕೊಂಡಿದ್ದ ಕನ್ನಡಿಗರಿಗೆ ಮಾತ್ರ ಸರಕಾರದ ವತಿಯಿಂದ ಮನೆಗಳನ್ನು ನೀಡಲಾಗುವುದು. ಬೇರೆಯವರೆಗೆ ಕೊಡಲು ಸಾಧ್ಯವಿಲ್ಲ ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿ ವಾಸವಿದ್ದ ಎಲ್ಲರ ಬಳಿಯೂ ಆಧಾರ್ ಕಾರ್ಡ್ ಇದೆ. ಮುಖ್ಯಮಂತ್ರಿ ಸೂಚನೆಗೆ ಮೇರೆಗೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ನಮ್ಮ ರಾಜ್ಯದವರಾಗಿದ್ದು, ಅವರಿಗೆ ಎಲ್ಲಿಯೂ ಮನೆ, ನಿವೇಶನ ಇಲ್ಲದಿದ್ದರೆ ಅಂತಹ ಅರ್ಹರಿಗೆ ಮಾತ್ರ ಮನೆಗಳನ್ನು ನೀಡುತ್ತೇವೆ ಎಂದು ಹೇಳಿದರು.
ಬಾಂಗ್ಲಾದೇಶದಿಂದ ಬಂದಿರುವವರಿಗೆ ಸರಕಾರ ಮನೆಗಳನ್ನು ಕೊಡುತ್ತಿದೆ ಎಂದು ಬಿಜೆಪಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಝಮೀರ್ ಅಹ್ಮದ್, ಎಲ್ಲೋ ಬಾಂಗ್ಲಾದೇಶದಿಂದ ಬಂದವರಿಗೆ ನಮ್ಮ ರಾಜ್ಯದಲ್ಲಿ ಮನೆ ಕೊಡಲು ಆಗುತ್ತಾ ? ನನಗಿರುವ ಮಾಹಿತಿ ಪ್ರಕಾರ ಇಲ್ಲಿ ಯಾರೂ ಬಾಂಗ್ಲಾದೇಶದವರು ಇಲ್ಲ ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ, ಜಿಬಿಎ ಆಯುಕ್ತರು, ವಸತಿ ಇಲಾಖೆಯ ಅಧಿಕಾರಿಗಳು ಅಲ್ಲಿರುವವರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅವರು ಅರ್ಹರ ಪಟ್ಟಿಯನ್ನು ಸಿದ್ಧ ಮಾಡಿಕೊಡುತ್ತಾರೆ. ಆನಂತರವಷ್ಟೇ, ಮನೆಗಳನ್ನು ಮಂಜೂರು ಮಾಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಭಾರತದಲ್ಲಿ ಮುಸ್ಲಿಮರಿಗೆ ತೊಂದರೆ ಆಗುತ್ತಿದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಬಗ್ಗೆ ಮಾತನಾಡಲು ಅವರಿಗೆ ಯಾವ ಹಕ್ಕಿದೆ? ಪಾಕಿಸ್ತಾನಕ್ಕೂ ನಮಗೂ ಯಾವ ಸಂಬಂಧವು ಇಲ್ಲ. ನಮ್ಮ ದೇಶದಲ್ಲಿನ ಮುಸ್ಲಿಮರನ್ನು ನಾವು ನೋಡಿಕೊಳ್ಳುತ್ತೇವೆ. ಮೊದಲು ಅವರ ದೇಶದಲ್ಲಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ ಎಂದು ತಿರುಗೇಟು ನೀಡಿದರು.
ರಾಜ್ಯ ಸರಕಾರದ ಆಡಳಿತದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಝಮೀರ್ ಅಹ್ಮದ್, ನಮ್ಮದು ರಾಷ್ಟ್ರೀಯ ಪಕ್ಷ. ಅವರು ನಮ್ಮ ನಾಯಕರು. ಕರ್ನಾಟಕದಲ್ಲಿ ಇಂಥದೊಂದು ಸುದ್ದಿ ಆಗುತ್ತಿದೆ ಎಂದು ಮುಖ್ಯಮಂತ್ರಿಗೆ ಹೇಳಿದ್ದಾರೆ. ಅದರಂತೆ, ಮುಖ್ಯಮಂತ್ರಿ ಸಭೆ ಮಾಡಿ ಚರ್ಚೆ ನಡೆಸಿದ್ದಾರೆ. ನಮ್ಮ ರಾಜ್ಯದವರಿಗೆ ಮಾತ್ರ ಮನೆಗಳನ್ನು ನೀಡುವ ನಿರ್ಧಾರ ಮಾಡಿದ್ದಾರೆ. ಇದರಲ್ಲಿ ಹಸ್ತಕ್ಷೇಪದ ಮಾತು ಎಲ್ಲಿಂದ ಬರುತ್ತದೆ ಎಂದು ಹೇಳಿದರು.