ಆನ್‌ಲೈನ್, ಆಫ್‌ಲೈನ್ ಬೆಟ್ಟಿಂಗ್ ಆರೋಪ ಪ್ರಕರಣ; ಶಾಸಕ ವೀರೇಂದ್ರ ಪಪ್ಪಿಗೆ ಜಾಮೀನು
ವೀರೇಂದ್ರ ಪಪ್ಪಿ Photo Credit: thehindu
ಬೆಂಗಳೂರು : ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಆರೋಪ ಸಂಬಂಧ ಅಕ್ರಮ ಹಣ ವರ್ಗಾವಣೆ (ಪಿಎಂಎಲ್) ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಅಲಿಯಾಸ್ ವೀರೇಂದ್ರ ಪಪ್ಪಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ವೀರೇಂದ್ರ ಪಪ್ಪಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಮಂಗಳವಾರ ಪ್ರಕಟಿಸಿದ್ದು, ಆರೋಪಿಯು 5 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡಬೇಕು. ಪಾಸ್‌ಪೋರ್ಟ್ ಅನ್ನು ಸಕ್ಷಮ ನ್ಯಾಯಾಲಯಕ್ಕೆ ಒಪ್ಪುಸಬೇಕು ಹಾಗೂ ಪ್ರಕರಣ ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಪ್ರಕರಣದ ಹಿನ್ನೆಲೆ:
2025ರ ಆಗಸ್ಟ್ 22 ಮತ್ತು 23ರಂದು ಜಾರಿ ನಿರ್ದೇಶನಾಲಯದ (ಈಡಿ) ಬೆಂಗಳೂರು ಕಚೇರಿಯ ಅಧಿಕಾರಿಗಳು ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ, ಜೋಧಪುರ, ಗ್ಯಾಂಗ್ಟೋಕ್, ಮುಂಬೈ ಮತ್ತು ಗೋವಾ ಸೇರಿ ದೇಶದ ವಿವಿಧ 31 ಕಡೆಗಳಲ್ಲಿ (ಪಪ್ಪಿ ಕ್ಯಾಸಿನೊ ಗೋಲ್ಡ್, ಓಸಿಯನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಸಿಯನ್ 7 ಕ್ಯಾಸಿನೊ, ಬಿಗ್ ಡ್ಯಾಡಿ ಕ್ಯಾಸಿನೊ ಮುಂತಾದ ಕ್ಯಾಸಿನೊ ಅಡ್ಡೆಗಳಲ್ಲಿ) ಅಕ್ರಮ ಆಫ್‌ಲೈನ್ ಮತ್ತು ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿದ್ದರು.
ಆ ವೇಳೆ ಕಿಂಗ್ 567, ರಾಜ 567 ಇತ್ಯಾದಿ ಹೆಸರಿನಲ್ಲಿ ವೀರೇಂದ್ರ ಪಪ್ಪಿ ಅವರು ಹಲವು ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿರುವುದು ಪತ್ತೆಯಾಗಿದೆ. ವೀರೇಂದ್ರ ಪಪ್ಪಿ ಸಹೋದರ ಕೆ.ಸಿ. ತಿಪ್ಪೇಸ್ವಾಮಿಯು ದುಬೈನಿಂದ ಡೈಮಂಡ್ ಸಾಫ್ಟ್‌ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್, ಪ್ರೈಮ್9 ಟೆಕ್ನಾಲಜೀಸ್ ಹೆಸರಿನ 3 ಉದ್ಯಮಗಳನ್ನು ನಡೆಸುತ್ತಿರುವುದು ಪತ್ತೆಯಾಗಿದೆ ಎಂದು ಈಡಿ ಹೇಳಿತ್ತು.
ಶೋಧದ ವೇಳೆ 12 ಕೋಟಿ ರೂ. ನಗದು, 1 ಕೋಟಿ ವಿದೇಶಿ ನೋಟು, 6 ಕೋಟಿ ಮೌಲ್ಯದ ಚಿನ್ನಾಭರಣ, 10 ಕೆಜಿ ಬೆಳ್ಳಿ ಹಾಗೂ 4 ವಾಹನಗಳನ್ನು ಪಿಎಂಎಲ್ ಕಾಯ್ದೆ ಅಡಿ ಜಪ್ತಿ ಮಾಡಲಾಗಿತ್ತು. ಇದರ ಜತೆಗೆ 17 ಬ್ಯಾಂಕ್ ಖಾತೆ ಮತ್ತು 2 ಲಾಕರ್‌ಗಳನ್ನು ಜಪ್ತಿ ಮಾಡಲಾಗಿತ್ತು. ಕ್ಯಾಸಿನೊ ಒಂದರ ಗುತ್ತಿಗೆ ಪಡೆಯಲು ಸಿಕ್ಕಿಂನ ಗ್ಯಾಂಗ್ಟೋಕ್‌ಗೆ ತೆರಳಿದ್ದ ವೀರೇಂದ್ರ ಪಪ್ಪಿಯನ್ನು ಆಗಸ್ಟ್ 23ರಂದು ಈಡಿ ಅಧಿಕಾರಿಗಳು ಬಂಧಿಸಿದ್ದರು. ವೀರೇಂದ್ರ ವಿರುದ್ಧ ಅಕ್ಟೋಬರ್ 18ರಂದು ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
ಕನಕಪುರದ ಹಾರೋಹಳ್ಳಿಯಲ್ಲಿ ಬಾಕಿ ಇರುವ ಎಫ್‌ಐಆರ್ ಪ್ರೆಡಿಕೇಟ್ ಅಪರಾಧಕ್ಕೆ (ಅಕ್ರಮಗಳಿಕೆಗೆ ಕಾರಣವಾದ ಮೂಲ ಅಪರಾಧ) ಪೂರಕವಾಗಿದೆ ಎಂದು ಇತ್ತೀಚೆಗೆ ಹೇಳಿದ್ದ ಹೈಕೋರ್ಟ್ ಪಪ್ಪಿ ಅವರ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಲು ನಿರಾಕರಿಸಿತ್ತು.