ಚಿಲುಮೆ ಹಗರಣ | ತುಷಾರ್ ಗಿರಿನಾಥ್ ರನ್ನು ಯಾವ ವಾಷಿಂಗ್ ಮಿಷನ್ ನಲ್ಲಿ ಹಾಕಿ ತೊಳೆದಿದ್ದೀರಿ ?: ಡಿಕೆಶಿಗೆ ʼನೈಜ ಹೋರಾಟಗಾರರ ವೇದಿಕೆʼ ಪ್ರಶ್ನೆ
ತುಷಾರ್ ಗಿರಿನಾಥ್ | ಡಿ.ಕೆ ಶಿವಕುಮಾರ್ | ಎಚ್. ಎಂ ವೆಂಕಟೇಶ್
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರದ ತುಷಾರ್ ಗಿರಿನಾಥ್ ಅವರನ್ನು ತಕ್ಷಣ ವರ್ಗಾವಣೆ ಮಾಡಿ, ಅವರ ಸೇವೆಯನ್ನು ಅಮಾನತ್ತಿನಲ್ಲಿ ಇಡಬೇಕು ಎಂದು ʼನೈಜ ಹೋರಾಟಗಾರರ ವೇದಿಕೆʼ ಒತ್ತಾಯಿಸಿದೆ.
ಈ ಸಂಬಂಧ ʼನೈಜ ಹೋರಾಟಗಾರರ ವೇದಿಕೆʼಯ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಎಚ್.ಎಂ ವೆಂಕಟೇಶ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ʼʼಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ʼಚಿಲುಮೆ ಹಗರಣ'ಕ್ಕೆ ಸಂಬಂಧಿಸಿ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನೇತೃತ್ವದ ನಿಯೋಗ ಅಂದಿನ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಅವರನ್ನು ಭೇಟಿಯಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ತುಷಾರ್ ಗಿರಿನಾಥ್ ಅವರ ಮೇಲೆ ದೂರು ನೀಡಿ, ಕ್ರಮಕ್ಕೆ ಒತ್ತಾಯಿಸಿತ್ತು. ಆದರೆ ಮಹತ್ವದ ವಿಷಯವೆಂದರೆ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರದ ತುಷಾರ್ ಗಿರಿನಾಥ್ ರವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸುತ್ತಿರುವುದು ಆಶ್ಚರ್ಯಕರ ಸಂಗತಿ ಆಗಿದೆʼʼ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ʼʼಅದರಲ್ಲೂ ಮುಖ್ಯವಾಗಿ ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ ಡಿಕೆ ಶಿವಕುಮಾರ್ ರವರೇ ಬೆಂಗಳೂರು ನಗರದ ಅಭಿವೃದ್ಧಿ ಸಚಿವರಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ತುಷಾರ್ ಗಿರಿನಾಥ್ ಅವರನ್ನೇ ಮುಂದುವರಿಸುತ್ತಿರುವುದನ್ನು ನಗರದ ಮತ್ತು ಕರ್ನಾಟಕದ ಜನ ಗಮನಿಸುತ್ತಿದ್ದಾರೆ. ಕಳ್ಳತನದ ಆರೋಪ ಹೊರಿಸಿ ದೂರನ್ನು ನೀಡಿ ತಾವು ಅಧಿಕಾರಕ್ಕೆ ಬಂದಮೇಲೆ ಅದೇ ಕಳ್ಳನನ್ನು ಮುಂದುವರಿಸಿಕೊಂಡು ಹೋಗುತ್ತಿರುವುದನ್ನು ನೋಡಿದರೆ ತುಷಾರ್ ಗಿರಿನಾಥ ಅವರನ್ನು ಯಾವ ವಾಷಿಂಗ್ ಮಿಷನ್ ನಲ್ಲಿ ಹಾಕಿ ತೊಳೆದಿದ್ದೀರಿ ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆʼʼ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.
ʼʼನಿಮ್ಮ ದೂರಿನಲ್ಲಿರುವ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರಾದ ಅಶ್ವತ್ ನಾರಾಯಣ್ ಈ ಬಗ್ಗೆ ಚಕಾರ ಎತ್ತದೇ ಇರುವುದನ್ನು ನೋಡಿದರೆ ನಿಮ್ಮ ನಿಮ್ಮಲ್ಲೇ ಒಳ ಒಪ್ಪಂದ ಆಗಿದೆ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ. ಒಟ್ಟಿನಲ್ಲಿ ನೀ ನನಗಿದ್ದರೆ ನಾ ನಿನಗೆ ನೆನಪಿರಲಿ ಸವಿನುಡಿ ನಮ್ಮೊಳಗೆ ಎಂಬ ಮಾತು ಈಗ ನಮಗೆ ನೆನಪಾಗುತ್ತಿದೆʼʼ ಎಂದು ಎಚ್.ಎಂ ವೆಂಕಟೇಶ್ ಪತ್ರದಲ್ಲಿ ತಿಳಿಸಿದ್ದಾರೆ.