×
Ad

ರಾಜ್ಯದಲ್ಲಿ ಇನ್ನೂ 3 ದಿನ ಮೋಡ ಕವಿದ ವಾತಾವರಣ

Update: 2024-01-09 22:14 IST
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅರೆ ವ್ಯಾಪಕ ಪ್ರಮಾಣದ ಸಾಧಾರಣ ಮಳೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ಮೂರು ದಿನಗಳ ಕಾಲ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಚದುರಿದಂತೆ ತುಂತುರು ಮಳೆಯಾಗುವ ನಿರೀಕ್ಷೆ ಇದೆ. ಆದರೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಆಗಾಗ್ಗೆ ತಂಪಾದ ಮೇಲ್ಮೈ ಗಾಳಿ ಬೀಸುವುದರಿಂದ ಹಗಲು ವೇಳೆಯೂ ಚಳಿಯ ಪ್ರಮಾಣ ಹೆಚ್ಚಾಗಿದೆ. ಸೋಮವಾರದಿಂದ ರಾಜ್ಯದ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಹಲವು ಕಡೆ ತುಂತುರು ಮಳೆಯಾಗಿದೆ.

ಶೇ.24ರಷ್ಟು ಮಳೆ ಕೊರತೆ: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ 2023ನೆ ವರ್ಷದಲ್ಲಿ ವಾಡಿಕೆಗಿಂತ ಶೇ.24ರಷ್ಟು ಕಡಿಮೆ ಮಳೆ ರಾಜ್ಯದಲ್ಲಾಗಿದೆ. 2023ರ ಎಪ್ರೀಲ್‍ನಿಂದ ಡಿಸೆಂಬರ್ ನಡುವಿನ ಅವಧಿಯಲ್ಲಿ 1140 ಮಿ.ಮೀ.ನಷ್ಟು ವಾಡಿಕೆ ಮಳೆ ಪ್ರಮಾಣವಿದ್ದರೆ, 862 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದ್ದು, ಶೇ.24ರಷ್ಟು ಕೊರತೆ ಉಂಟಾಗಿತ್ತು.

ಅದೇ ರೀತಿ ಜನವರಿ ಒಂದರಿಂದ ಡಿಸೆಂಬರ್ ಅಂತ್ಯದವರೆಗೆ ವಾಡಿಕೆ ಮಳೆ ಪ್ರಮಾಣ 1153 ಮಿ.ಮೀ. ಆಗಿದ್ದು, ಕೇವಲ 872 ಮಿ.ಮೀ.ನಷ್ಟು ಮಳೆಯಾಗಿದೆ. ಈ ಅವಧಿಯಲ್ಲೂ ವಾಡಿಕೆಗಿಂತ ಶೇ.24ರಷ್ಟು ಮಳೆ ಕಡಿಮೆಯಾಗಿದೆ.

ಅಲ್ಲದೆ, ಹಿಂಗಾರು ಹಂಗಾಮಿನ ಅಕ್ಟೋಬರ್ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ ವಾಡಿಕೆ ಮಳೆ ಪ್ರಮಾಣ 182 ಮಿ.ಮೀ. ಆಗಿದ್ದು, 114 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ. ವಾಡಿಕೆಗಿಂತ ಶೇ.38ರಷ್ಟು ಕೊರತೆ ಉಂಟಾಗಿದೆ. ಡಿಸೆಂಬರ್ ನಲ್ಲಿ ಶೇ.30ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. 2024ರ ಮೊದಲ ಮಳೆ ಸೋಮವಾರ ಆರಂಭಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News