ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ
Photo credit: ANI
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು, 33 ಮಂದಿ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಜಿಲ್ಲಾಧಿಕಾರಿಯಿಂದ ಮ್ಯಾಜಿಸ್ಟ್ರೇಟಿಯಲ್ ತನಿಖೆಗೆ ಆದೇಶಿಸಿದ್ದು, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರವನ್ನು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಬುಧವಾರ ತಮ್ಮ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮ್ಯಾಜಿಸ್ಟ್ರೇಟಿಯಲ್ ತನಿಖೆಯಲ್ಲಿ ಕ್ರಿಕೆಟ್ ಅಸೋಸಿಯೇಷನ್‍ನವರ ವೈಫಲ್ಯವಿದೆಯೋ?, ಭದ್ರತಾ ವೈಫಲ್ಯವಿದೆಯೋ? ಅಥವಾ ಬೇರೆ ಏನಾದರೂ ಕಾರಣಗಳಿವೆಯೋ ಎಲ್ಲವೂ ಹೊರಗೆ ಬರಲಿದೆ. 15 ದಿನಗಳ ಒಳಗಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸಕ್ತ ಸಾಲಿನ ಟಾಟಾ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ವಿಧಾನಸೌಧದ ಬಳಿ ಅಭಿನಂದನಾ ಸಮಾರಂಭವನ್ನು ಆಯೋಜಿಸಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‍ನವರು ವಿಜಯೋತ್ಸವ ಆಯೋಜಿಸಿದ್ದರು ಎಂದು ಮುಖ್ಯಮಂತ್ರಿ ತಿಳಿಸಿದರು.
ಕಾಲ್ತುಳಿತಕ್ಕೆ ಒಳಗಾಗಿ 11 ಮಂದಿ ಮೃತಪಟ್ಟಿದ್ದಾರೆ. 33 ಜನ ಗಾಯಗೊಂಡಿದ್ದಾರೆ. ನಾನು ಬೌರಿಂಗ್ ಆಸ್ಪತ್ರೆ ಹಾಗೂ ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿದ್ದೆ. ವೈದ್ಯರ ಬಳಿ ಗಾಯಾಳುಗಳ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಭ್ರಮ ಆಚರಣೆ ಮಾಡುವಾಗ ಇಂತಹ ದುರಂತ ನಡೆಯಬಾರದಾಗಿತ್ತು. ಈ ಬಗ್ಗೆ ಸರಕಾರಕ್ಕೆ ಬಹಳ ದುಃಖವಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ನೀರಿಕ್ಷೆಗೂ ಮೀರಿ ಜನ ಸಾಗರ: ನಮ್ಮ ನಿರೀಕ್ಷೆಗೂ ಮೀರಿ ಜನ, ಅಭಿಮಾನಿಗಳು ಸೇರಿದ್ದರು. ವಿಧಾನಸೌಧದ ಎದುರು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ವಿಧಾನಸೌಧದ ಎದುರು ನಡೆದಂತಹ ಸಮಾರಂಭದಲ್ಲಿ ಯಾವುದೇ ದುರಂತ ಆಗಿಲ್ಲ. ಆದರೆ, ಚಿನ್ನಸ್ವಾಮಿ ಕ್ರಿಡಾಂಗಣದ ಬಳಿ ಈ ಕಾಲ್ತುಳಿತದಂತಹ ದೊಡ್ಡ ದುರಂತ ಸಂಭವಿಸಿದೆ. ಸರಕಾರವಾಗಲಿ, ಕ್ರಿಕೆಟ್ ಅಸೋಸಿಯೇಷನ್ ನವರಗಾಗಲಿ ಯಾರೂ ಕೂಡ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಅವರು ಹೇಳಿದರು.
ಕ್ರೀಡಾಂಗಣದಲ್ಲಿ ಸುಮಾರು 35 ಸಾವಿರ ಜನ ಕೂರಲು ಅನುಕೂಲವಾಗುವಂತೆ ಆಸನಗಳ ವ್ಯವಸ್ಥೆಯಿದೆ. ಆದರೆ, ಅಲ್ಲಿ ಎರಡರಿಂದ ಮೂರು ಲಕ್ಷ ಜನ ಸೇರಿದ್ದಾರೆ. ನಿನ್ನೆ ಸಂಜೆ ಕ್ರಿಕೆಟ್ ಅಸೋಸಿಯೇಷನ್ ನವರು ಕಾರ್ಯಕ್ರಮ ಆಯೋಜನೆ ಕುರಿತು ನಮಗೆ ಮಾಹಿತಿ ನೀಡಿದರು. ಕ್ರೀಡಾಂಗಣದಲ್ಲಿ ಇರುವ ಆಸನ ವ್ಯವಸ್ಥೆಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರಿರಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಜನ ಸೇರುವ ನಿರೀಕ್ಷೆ ಯಾರಿಗೂ ಇರಲಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.
10 ಲಕ್ಷ ರೂ.ಪರಿಹಾರ: ಕಾಲ್ತುಳಿತದಲ್ಲಿ ಮೃತಪಟ್ಟವರ ಪೈಕಿ ಹೆಚ್ಚಿನವರು ಯುವಕರು, ವಿದ್ಯಾರ್ಥಿಗಳಿದ್ದಾರೆ. ಅವರ ವಾರಸುದಾರರಿಗೆ ಸರಕಾರದ ವತಿಯಿಂದ 10 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು. ಗಾಯಗೊಂಡವರಿಗೆ ಸರಕಾರದ ವತಿಯಿಂದ ಉಚಿತ ಚಿಕಿತ್ಸೆ ಕೊಡಿಸುತ್ತೇವೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ವೆಚ್ಚವನ್ನು ಸರಕಾರವೇ ಭರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಒಟ್ಟು 47 ಜನ ಗಾಯಗೊಂಡಿದ್ದರು. ಈ ಪೈಕಿ 33 ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಉಳಿದವರು ಚಿಕಿತ್ಸೆ ಪಡೆದು ಹೋಗಿದ್ದಾರೆ. ಗಾಯಾಳುಗಳಿಗೆ ಊಟ, ಸಾರಿಗೆ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ತಿಳಿಸಿದ್ದೇನೆ. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸರಕಾರ ಪಾರ್ಥಿಸುತ್ತದೆ. ಅವರ ಕುಟುಂಬಗಳಿಗೆ ಈ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮುಖ್ಯಮಂತ್ರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ, ಮುಖ್ಯಮಂತ್ರಿಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.