×
Ad

ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ, ಅವರ ನಾಯಕತ್ವವನ್ನು ಪಕ್ಷ ಬಳಸಿಕೊಳ್ಳುತ್ತಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

Update: 2025-07-08 17:17 IST

ಡಿಸಿಎಂ ಡಿ.ಕೆ. ಶಿವಕುಮಾರ್ (Photo: X/@DKShivakumar)

ಹೊಸದಿಲ್ಲಿ: “ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರು, ಅವರ ನಾಯಕತ್ವವನ್ನು ಪಕ್ಷ ಬಳಸಿಕೊಳ್ಳುತ್ತಿದೆ. ಇದೇ 15ರಂದು ರಾಷ್ಟ್ರಮಟ್ಟದ ಹಿಂದುಳಿದ ವರ್ಗಗಳ ಸಮಿತಿ ಸಭೆಯು ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ನಡೆಯಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ದಿಲ್ಲಿಯಲ್ಲಿ ರಾಜಕೀಯಕ್ಕೆ ಸಂಬಂಧಿಸಿದಂತೆ ಏನಾದರೂ ಸಭೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಇದೇ 10ರಂದು ನಾನು, ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸಭೆ ಮಾಡಲಿದ್ದು, ಪಕ್ಷದ ವಿಚಾರವಾಗಿ ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು.

ಈ ಸಭೆ ಸಿದ್ದರಾಮಯ್ಯ ಅವರನ್ನು ಪಕ್ಷದ ಒಬಿಸಿ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವ ಬಗ್ಗೆ ಚರ್ಚೆಯೇ ಎಂಬ ಪ್ರಶ್ನೆಗೆ, “ಇಲ್ಲ, ಪಕ್ಷ ಸಂಘಟನೆ ವಿಚಾರವಾಗಿ ಈ ಸಭೆ ನಡೆಯಲಿದೆ. ಇನ್ನು ರಾಷ್ಟ್ರ ಮಟ್ಟದ ಒಬಿಸಿ ನಾಯಕರ ಸಭೆಯು ಇದೇ ತಿಂಗಳು 15ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕೆಪಿಸಿಸಿಯು ಈ ಸಭೆಯ ಆತಿಥ್ಯ ವಹಿಸಲಿದೆ. ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಮುಖ್ಯಮಂತ್ರಿಗಳು ಈ ಸಭೆಯ ನೇತೃತ್ವ ವಹಿಸಲಿದ್ದಾರೆ. ಅವರು ಸಮಿತಿಯ ಮುಖ್ಯಸ್ಥರಲ್ಲದೇ ಇದ್ದರೂ, ದೇಶದ ಪ್ರಭಾವಿ ನಾಯಕರಾಗಿರುವ ಹಿನ್ನೆಲೆಯಲ್ಲಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಹಿಂದುಳಿದ ವರ್ಗಗಳ ಸಂಘಟನೆಯಲ್ಲಿ ಅವರ ಕೊಡುಗೆ ಪಕ್ಷಕ್ಕೆ ಅಪಾರವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಅವರ ನಾಯಕತ್ವ ಹಾಗೂ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಿದೆ” ಎಂದರು.

ಸಿಎಂ ಸ್ಥಾನ ಖಾಲಿ ಇಲ್ಲ:

“ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ. ಹೀಗಾಗಿ ಈ ವಿಚಾರವಾಗಿ ಈಗ ಚರ್ಚೆ ಮಾಡಲು ಇದು ಸಮಯವಲ್ಲ” ಎಂದು ಡಿಕೆಶಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News