×
Ad

ಕಾಲ್ತುಳಿತ ಪ್ರಕರಣ | ಬಿಜೆಪಿ-ಜೆಡಿಎಸ್‌ನವರು ರಾಜಕೀಯ ಪ್ರೇರಿತ ಸುಳ್ಳುಗಳನ್ನು ಹೇಳುತ್ತಿದ್ದಾರೆ : ಸಿಎಂ‌ ಸಿದ್ದರಾಮಯ್ಯ

Update: 2025-06-08 20:46 IST

ಮೈಸೂರು : ತೆರದ ಬಸ್ ನಲ್ಲಿ ಆರ್.ಸಿ.ಬಿ. ಆಟಗಾರರ ವಿಜಯೋತ್ಸವಕ್ಕೆ ಅವಕಾಶ ನೀಡದೆ, ಅಭಿಮಾನಿಗಳ ಆಸೆಗೆ ರಾಜ್ಯ ಸರಕಾರ ಕಲ್ಲು ಹಾಕಿದೆ ಎಂದು ಬಿಜೆಪಿಯವರೆ ಟ್ವೀಟ್ ಮಾಡಿದ್ದಾರೆ. ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ- ಜೆಡಿಎಸ್‌ನವರು ರಾಜಕೀಯ ಪ್ರೇರಿತ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸರ ಮೇಲೆ ಸಿಎಂ ಸಿದ್ದರಾಮಯ್ಯ ಧಮ್ಕಿ ಹಾಕಿದ್ದರು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸುಳ್ಳು ಆರೋಪ ಮಾಡಿದ್ದಾರೆ. ನಾನು ಯಾವ ಪೊಲೀಸರ ಮೇಲೆ ಧಮ್ಕಿ ಹಾಕಿಯೇ ಇಲ್ಲ. ಇದೆಲ್ಲಾ ರಾಜಕೀಯ ಪ್ರೇರಿತ ಆರೋಪ ಎಂದು ಹರಿಹಾಯ್ದರು.

ಕಾಲ್ತುಳಿತ ಪ್ರಕರಣದಲ್ಲಿ ಸರಕಾರದ ಯಾವ ತಪ್ಪು ಇಲ್ಲ. ಬಂದೋಬಸ್ತ್ ವ್ಯವಸ್ಥೆ ಮಾಡಬೇಕಿದ್ದು ಪೊಲೀಸ್ ಅಧಿಕಾರಿಗಳ ಕರ್ತವ್ಯ. ಮೇಲ್ನೋಟಕ್ಕೆ ಪೊಲೀಸ್ ಅಧಿಕಾರಿಗಳ ತಪ್ಪು ಕಂಡು ಬಂದಿರುವುದರಿಂದ ಅವರನ್ನು ಅಮಾನತುಗೊಳಿಸಲಾಗಿದೆ. ಬರೀ ಪೊಲೀಸರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಗುಪ್ತಚರ ಇಲಾಖೆ ಅಧಿಕಾರಿ ಮತ್ತು ನನ್ನ ರಾಜಕೀಯ ಕಾರ್ಯದರ್ಶಿ ಆಗಿದ್ದ ಗೋವಿಂದರಾಜು ಅವರ ಮೇಲೂ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಸರಕಾರದ ಯಾವ ಪಾತ್ರವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಮತ್ತು ಜೆಡಿಎಸ್ ನವರು ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯ ಮಾಡುತ್ತಿದ್ದರು. ಅವರ ಒತ್ತಾಯದಂತೆ ಈಗ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದೆ. ಬಿಜೆಪಿ-ಜೆಡಿಎಸ್ ಸುಮ್ಮನೆ ಸುಳ್ಳುಗಳನ್ನು ಹೇಳಿ ಜನರ ಧಿಕ್ಕು ತಪ್ಪಿಸಬಾರದು ಎಂದು ಹೇಳಿದರು.

ಸರಕಾರದ ಮೇಲೆ ದೂಷಣೆ ಮಾಡುವ ಇವರು ಕುಂಭಮೇಳದಲ್ಲಿ 50-60 ಜನ ಕಾಲ್ತುಳಿತಕ್ಕೆ ಸಾವನ್ನಪ್ಪಿದಾಗ ಅಲ್ಲಿನ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯ ಮಾಡಿದ್ದರಾ? ಹೊಸದಾಗಿ ನಿರ್ಮಾಣ ಮಾಡಿದ್ದ ಸೇತುವೆ ಉದ್ಘಾಟನೆ ವೇಳೆ ಕುಸಿದು ಬಿದ್ದು ನೂರಾರು ಜನ ಸಾವನ್ನಪ್ಪಿದಾಗ ನರೇಂದ್ರ ಮೋದಿ ರಾಜೀನಾಮೆ ನೀಡಿದ್ದರೆಯೇ? ಎಂದು ಪ್ರಶ್ನಿಸಿದರು.

ಆರ್.ಸಿ.ಬಿ. ತಂಡ ಅಭಿನಂದಿಸಲು ಅನುಮತಿ ಕೇಳಿದ್ದರು. ಮುಖ್ಯಕಾರ್ಯದರ್ಶಿ ಅವರು ಅವಕಾಶ ಮಾಡಿಕೊಡಬಹುದು ಎಂದು ಹೇಳಿದ ಮೇಲೆ ವಿಧಾನಸೌಧದ ಮುಂದೆ ಕಾರ್ಯಕ್ರಮ‌ ಯೋಜನೆ ಮಾಡಲಾಯಿತು. ಆರ್.ಸಿ.ಬಿ. ಕಾರ್ಯದರ್ಶಿ, ಖಜಾಂಜಿ ನನ್ನನ್ನು ಆಹ್ವಾನಿಸಿದರು. ರಾಜ್ಯಪಾಲರು ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಹೇಳಿದರು. ವಿಧಾನಸೌಧದಲ್ಲಿ ಕಾರ್ಯಕ್ರಮ ನಡೆದ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ 11 ಜನ ಕಾಲ್ತುಳಿತದಿಂದ ಸಾವನ್ನಪ್ಪಿರುವುದು. ಕಾಲ್ತುಳಿತದಿಂದ ಮೃತ ಪಟ್ಟಿರುವ ವಿಷಯ ನನಗೆ ಸಂಜೆ 5.45 ಕ್ಕೆ ಗೊತ್ತಾಯಿತು. ಆದರೆ 3.45ಕ್ಕೆ ಈ ಅವಘಡ ಸಂಭವಿಸಿದೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿದೆ. ಇಂತಹ ಘಟನೆ ಆಗಬಾರದಿತ್ತು ಆಗಿದೆ. ಇದಕ್ಕೆ ನನಗೆ ನಮ್ಮ ಸರಕಾರಕ್ಕೆ ಮತ್ತು ರಾಜ್ಯದ ಪ್ರತಿಯೊಬ್ಬರಿಗೂ ನೋವಾಗಿದೆ ಎಂದು ಹೇಳಿದರು.

ಮಂಗಳೂರಿನಲ್ಲಿ ಕೊಲೆಯಾದ ಸುನೀಲ್ ಶೆಟ್ಟಿ ಪ್ರಕರಣವನ್ನು ಎನ್.ಐ.ಎಗೆ ನೀಡುವಂತೆ ಕೋರಿರುವ ಕೇಂದ್ರದ ತೀರ್ಮಾನದ ಬಗ್ಗೆ ಇದೀಗ ತಿಳಿದಿದ್ದು, ನಮ್ಮ ಅಡ್ವೊಕೇಟ್ ಜನರಲ್ ಜೊತೆ ತೀರ್ಮಾನ ಮಾಡಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

-ಸಿದ್ದರಾಮಯ್ಯ, ಮುಖ್ಯಮಂತ್ರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News