×
Ad

ಸ್ವಾಧೀನ ಪ್ರಮಾಣಪತ್ರ ಇಲ್ಲದ ಕಟ್ಟಡಗಳಿಗೆ ವಿದ್ಯುತ್, ನೀರಿನ ಸಂಪರ್ಕ ಕಲ್ಪಿಸಲು ಅ.8ಕ್ಕೆ ಮತ್ತೊಂದು ಸುತ್ತಿನ ಸಭೆ : ಸಿಎಂ ಸಿದ್ದರಾಮಯ್ಯ

Update: 2025-09-29 20:20 IST

ಬೆಂಗಳೂರು, ಸೆ.29: ಆರಂಭಿಕ ಪ್ರಮಾಣಪತ್ರ(ಸಿಸಿ) ಮತ್ತು ಸ್ವಾಧೀನ ಪ್ರಮಾಣಪತ್ರ(ಒಸಿ) ಇಲ್ಲದೆ ನಿರ್ಮಿಸಿರುವ ಕಟ್ಟಡಗಳಿಗೆ ವಿದ್ಯುತ್, ನೀರಿನ ಸಂಪರ್ಕ ಕಲ್ಪಿಸಲು ಇರುವ ಕಾನೂನು ತೊಡಕುಗಳ ಬಗ್ಗೆ ಅ.8ರಂದು ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸೋಮವಾರ ಇಲ್ಲಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಾಗೂ ರಾಜ್ಯದ ಇತರೆ ಕಡೆಗಳಲ್ಲಿ ಸಿಸಿ ಮತ್ತು ಒಸಿ ಇಲ್ಲದೆ ಕಟ್ಟಡಗಳು ನಿರ್ಮಾಣಗೊಂಡಿದ್ದು, ಇಂತಹ ಕಟ್ಟಡಗಳನ್ನು ಸುಪ್ರಿಂ ಕೋರ್ಟ್ ಆದೇಶದಂತೆ ನಿರ್ನಾಮ ಮಾಡಬೇಕಾಗುತ್ತದೆ. ಆದರೆ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ನೆಲಸಮಗೊಳಿಸಲು ಸಾಧ್ಯವಿಲ್ಲ. ಸರಕಾರದ ನಿರ್ಧಾರದಿಂದ ಜನರಿಗೆ ಅನುಕೂಲವಾಗಬೇಕು ಎಂದರು.

ಸುಪ್ರೀಂಕೋರ್ಟ್ ಆದೇಶ ಅನುಷ್ಠಾನಗೊಳ್ಳುವ ಮುಂಚೆ ಸಲ್ಲಿಕೆಯಾಗಿರುವ ಮಾರ್ಚ್ 2025ರವರೆಗಿನ ಅರ್ಜಿಗಳನ್ನು ಪರಿಗಣಿಸಿ ಒಸಿ ಮತ್ತು ಸಿಸಿಯಿಂದ ವಿನಾಯ್ತಿಗೊಳಿಸಿ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡುವ ಬಗ್ಗೆ ಕಾನೂನಿನ ಸಾಧ್ಯತೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಲು ಅ.8ರಂದು ಸಭೆ ನಡೆಸಬೇಕು. ಈ ಸಭೆಯಲ್ಲಿ ಸರಕಾರದ ಮುಖ್ಯಕಾರ್ಯದರ್ಶಿಗಳು, ಸಂಬಂಧಪಟ್ಟ ಇಲಾಖಾ ಸಚಿವರು, ಸರಕಾರದ ಅಡ್ವೋಕೇಟ್ ಜನರಲ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಾಜರಾಗಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸುಪ್ರೀಂಕೋರ್ಟ್‍ನ ಆದೇಶ ಭಾರತದ ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತಿದ್ದೂ, ಎಲ್ಲ ರಾಜ್ಯಗಳೂ ಆದೇಶವನ್ನು ಅನುಷ್ಠಾನಗೊಳಿಸುತ್ತಿವೆಯೇ ಎಂದು ಪರಿಶೀಲಿಸಬೇಕು. ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಅನುಮತಿ ನೀಡುವ ಸಾಧ್ಯತೆ ಇದೆಯೇ ಎಂದು ಪರಿಶೀಲಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News