×
Ad

ಹೊಸ 7 ಜಿಟಿಟಿಸಿ ಕೇಂದ್ರಗಳ ಕಾಮಗಾರಿ ಶೀಘ್ರದಲ್ಲಿಯೇ ಆರಂಭ : ಸಿಎಂ ಸಿದ್ದರಾಮಯ್ಯ

Update: 2025-11-25 19:51 IST

ಬೆಂಗಳೂರು : ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡುವ ಸಲುವಾಗಿ ಈಗಾಗಲೇ ಹೊಸ 7 ಜಿಟಿಟಿಸಿ(ಸರಕಾರಿ ಉಪಕರಣಾಗಾರ ಮತ್ತು ತರಬೇತಿ) ಕೇಂದ್ರಗಳನ್ನು ಸ್ಥಾಪಿಸುವ ಘೋಷಣೆ ಮಾಡಲಾಗಿದ್ದು, ಈ ಸಂಬಂಧ ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಧುಗಿರಿ ಮತ್ತು ಇಂಡಿ ನಬಾರ್ಡ್ ಸಹಯೋಗದೊಂದಿಗೆ ಹಾಗೂ ಕಂಪ್ಲಿ, ರಾಯಚೂರು ಗ್ರಾಮೀಣ ಮತ್ತು ಸಿಂಧನೂರಿನಲ್ಲಿ ಕೆ.ಕೆ.ಆರ್.ಡಿ.ಬಿ ಮ್ಯಾಕ್ರೋ ಅನುದಾನದಡಿ ನೂತನ ಜಿಟಿಟಿಸಿ ಗಳನ್ನು ಸ್ಥಾಪಿಸುವ ಸಂಬಂಧ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡುವ ಜಿಟಿಟಿಸಿ ಮೂಲಕ ಗ್ರಾಮೀಣ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಲು ಸಾಧ್ಯವಾಗಿದೆ. ರಾಜ್ಯದಲ್ಲಿ ಒಟ್ಟು 32 ಜಿಟಿಟಿಸಿ ಕೇಂದ್ರಗಳಿವೆ. ಈ ಸಾಲಿನ ಬಜೆಟ್‍ನಲ್ಲಿ ಹೊಸ 7 ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸುವ ಘೋಷಣೆ ಮಾಡಲಾಗಿದ್ದು, ಈ ಕೇಂದ್ರಗಳ ಕಾಮಗಾರಿ ಆದಷ್ಟು ಶೀಘ್ರದಲ್ಲಿ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದರು.

ಇಂಡಿ, ಮಧುಗಿರಿ, ಕಂಪ್ಲಿ, ರಾಯಚೂರು ಗ್ರಾಮೀಣ, ಸಿಂಧನೂರಿನಲ್ಲಿ ಜಿಟಿಟಿಸಿ ಪ್ರಾರಂಭಿಸಲು ಸ್ಥಳ ಗುರುತಿಸಲಾಗಿದ್ದು, ಕಾಮಗಾರಿ ಪ್ರಾರಂಭಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. ಸಂಡೂರು ಮತ್ತು ಹೊಸದುರ್ಗ ತಾಲೂಕುಗಳಲ್ಲಿ ಪ್ರಕ್ರಿಯೆ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದೂ ಉಲ್ಲೇಖಿಸಿದರು.

ಜಿಟಿಟಿಸಿ ಪ್ರವೇಶಾತಿಯನ್ನು 6 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇಲ್ಲಿಂದ ತರಬೇತಿ ಪಡೆದು ಹೊರಬರುವ ವಿದ್ಯಾರ್ಥಿಗಳಿಗೆ ವಿದೇಶಿ ಕಂಪೆನಿಗಳಲ್ಲಿಯೂ ಸೇರಿದಂತೆ ಶೇಕಡ 100 ರಷ್ಟು ನೇಮಕಾತಿ ಆಗುತ್ತಿದೆ. ಬೇಡಿಕೆಯಿರುವ ಕೋರ್ಸ್‍ಗಳನ್ನು ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಜತೆಗೆ, ಕೈಗಾರಿಕೆಗಳ ಬೇಡಿಕೆಗಳಿಗೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸಭೆಯಲ್ಲಿ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಸೇರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಟಿಟಿಸಿ ಜೊತೆ ಒಪ್ಪಂದ: ಮತ್ತೊಂದು ಸಭೆಯಲ್ಲಿ, ಐಫೋನ್ ತಯಾರಕ ಫಾಕ್ಸ್‌ ಕಾನ್‍ಗೆ ಕ್ಯಾಮೆರಾ ಪರಿಕರಗಳನ್ನು ಒದಗಿಸುವ ಕೊರಿಯನ್ ಸಂಸ್ಥೆಯಾದ ಹೈವಿಷನ್ ಇಂಡಿಯಾ ಪ್ರೈ ಲಿಮಿಟೆಡ್‍ನ ಮುಖ್ಯಸ್ಥರು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ಸಮ್ಮುಖದಲ್ಲಿ ಜಿಟಿಟಿಸಿ ಒಪ್ಪಂದಕ್ಕೆ ಸಹಿ ಹಾಕಿತು.

ತಾಂತ್ರಿಕ ತರಬೇತಿ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಯಾಂತ್ರೀಕೃತತೆ, ನಿಖರ ಯಂತ್ರೋಪಕರಣ ಮತ್ತು ಸಲಕರಣೆಗಳ ಜೋಡಣೆಯಂತಹ ಕ್ಷೇತ್ರಗಳಲ್ಲಿ ಸೌಲಭ್ಯಗಳ ಹಂಚಿಕೆಯಲ್ಲಿ ಸಹಕಾರಕ್ಕಾಗಿ ಈ ಒಪ್ಪಂದವು ಅವಕಾಶವನ್ನು ಒದಗಿಸುತ್ತದೆ.

ಒಪ್ಪಂದಕ್ಕೆ ಹೈವಿಷನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಲೀ ಯುನ್ಹೋ ಮತ್ತು ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಸಿದ್ದಲಿಂಗಪ್ಪ ಪೂಜಾರಿ ಸಹಿ ಹಾಕಿದರು. ಎರಡೂ ಸಂಸ್ಥೆಗಳು ಅರ್ಹ ಜಿಟಿಟಿಸಿ ಪ್ರಶಿಕ್ಷಣಾರ್ಥಿಗಳಿಗೆ ಕೈಗಾರಿಕಾ ಮಾನ್ಯತೆ, ಇಂಟರ್ನ್‍ಶಿಪ್ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲು ಸಮ್ಮತಿಸಿವೆ.

ಜೊತೆಗೆ ಶೈಕ್ಷಣಿಕ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಕೈಗಾರಿಕಾ ಸೌಲಭ್ಯಗಳು ಮತ್ತು ಪ್ರಾತ್ಯಕ್ಷಿಕೆ ಸಲಕರಣೆಗಳನ್ನು ಪೂರೈಸಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News