ರಾಜ್ಯದ ಜನರಿಗೆ ಕೊಟ್ಟ ಮಾತೇ ನಮಗೆ ಜಗತ್ತು: ಸಿಎಂ ಸಿದ್ದರಾಮಯ್ಯ
“ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ” ಎಂದಿದ್ದ ಡಿಕೆಶಿ
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ʼಅಧಿಕಾರ ಹಂಚಿಕೆ ಬಿಕ್ಕಟ್ಟುʼ ತಾರಕಕ್ಕೇರಿರುವಾಗಲೇ, ಇಂದು ಬೆಳಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡಿದ್ದ “ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ” ಎಂಬ ಪೋಸ್ಟ್ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಪೋಸ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೇ ಗುರಿಯಾಗಿಸಿಕೊಂಡಿದೆ ಎಂಬ ಮಾತುಗಳೂ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿದ್ದವು.
ಈ ಮಾತುಗಳನ್ನು ಸಮರ್ಥಿಸುವಂತೆ ಇಂದು ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಜನರಿಗಾಗಿ ಜಗತ್ತನ್ನು ಉತ್ತಮಗೊಳಿಸದಿದ್ದರೆ, ಮಾತು ಶಕ್ತಿಯಾಗುವುದಿಲ್ಲ” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
“ನಮ್ಮ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆಯು 600 ಕೋಟಿ ಉಚಿತ ಪ್ರಯಾಣಗಳನ್ನು ನೀಡಿದೆ ಎಂದು ಘೋಷಿಸಲು ಹೆಮ್ಮೆಯಾಗುತ್ತಿದೆ. ಸರಕಾರ ರಚಿಸಿದ ಪ್ರಪ್ರಥಮ ತಿಂಗಳೇ ನಾವು ನಮ್ಮ ಗ್ಯಾರಂಟಿಗಳನ್ನು ವಾಸ್ತವದಲ್ಲಿ ಕ್ರಿಯೆಯಾಗಿ ಪರಿವರ್ತಿಸಿದೆವೆಯೇ ಹೊರತು, ಮಾತುಗಳಾಗಿಯಲ್ಲ” ಎಂದು ಅವರು ಹೇಳಿದ್ದಾರೆ.
ಸುಮಾರು 600 ಕೋಟಿಗೂ ಹೆಚ್ಚು ಪ್ರಯಾಣಗಳನ್ನು ಒದಗಿಸುವ ಮೂಲಕ, ಉದ್ಯೋಗಸ್ಥ ಮಹಿಳೆಯರ ಘನತೆ ಮತ್ತು ಚಲನಶೀಲತೆಯನ್ನು ಮರು ಸ್ಥಾಪಿಸಲಾಗಿದೆ. ಮಹಿಳೆಯರ ನೇತೃತ್ವದ 1.24 ಕೋಟಿ ಕುಟುಂಬಗಳನ್ನು ಗೃಹಲಕ್ಷ್ಮಿ ಯೋಜನೆಯ ಮೂಲಕ ಸಬಲೀಕರಣಗೊಳಿಸಲಾಗಿದೆ. ಯುವ ನಿಧಿ ಯೋಜನೆಯ ಮೂಲಕ ಸುಮಾರು 3 ಲಕ್ಷಕ್ಕೂ ಹೆಚ್ಚು ಯುವಕರಿಗೆ ರಕ್ಷಣೆ ಮತ್ತು ಭರವಸೆಯ ಮೂಲಕ ನೆರವು ಒದಗಿಸಲಾಗಿದೆ. ಅನ್ನಭಾಗ್ಯ 2.0 ಮೂಲಕ 4.08 ಕೋಟಿ ನಾಗರಿಕರಿಗೆ ಆಹಾರ ಭದ್ರತೆಯನ್ನು ಖಾತರಿಗೊಳಿಸಲಾಗಿದೆ. ಗೃಹ ಜ್ಯೋತಿ ಯೋಜನೆಯ ಮೂಲಕ 1.64 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸಲಾಗಿದೆ ಎಂದು ಅವರು ತಮ್ಮ ಸಾಧನೆಗಳನ್ನು ಪಟ್ಟಿ ಮಾಡಿದ್ದಾರೆ.
ನನ್ನ ಮೊದಲ ಅವಧಿಯಲ್ಲಿ (2013-2018) ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ 165 ಆಶ್ವಾಸನೆಗಳ ಪೈಕಿ 157 ಆಶ್ವಾಸನೆಗಳನ್ನು ಈಡೇರಿಸುವ ಮೂಲಕ, ಶೇ. 95ರಷ್ಟು ಆಶ್ವಾಸನೆಗಳನ್ನು ಈಡೇರಿಸಲಾಗಿತ್ತು. ಈ ಅವಧಿಯಲ್ಲಿ 593 ಆಶ್ವಾಸನೆಗಳ ಪೈಕಿ 243ಕ್ಕೂ ಹೆಚ್ಚು ಆಶ್ವಾಸನೆಗಳನ್ನು ಈಗಾಗಲೇ ಪೂರೈಸಲಾಗಿದೆ ಹಾಗೂ ಉಳಿದ ಆಶ್ವಾಸನೆಗಳನ್ನು ಬದ್ಧತೆ, ವಿಶ್ವಾಧಸಾರ್ಹತೆ ಹಾಗೂ ಕಾಳಜಿಯೊಂದಿಗೆ ಪೂರೈಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಕರ್ನಾಟಕದ ಜನತೆ ನೀಡಿರುವ ಜನಮತ ಕೇವಲ ಕ್ಷಣಿಕವಲ್ಲ; ಅದು ಐದು ವರ್ಷಗಳ ಪೂರ್ಣಾವಧಿಯ ಜವಾಬ್ದಾರಿಯಾಗಿದೆ. ನಾನೂ ಒಳಗೊಂಡಂತೆ ಕಾಂಗ್ರೆಸ್ ಪಕ್ಷವು ಸಹಾನುಭೂತಿ ಸ್ಥಿರತೆ ಮತ್ತು ಧೈರ್ಯದೊಂದಿಗೆ ನಮ್ಮ ಜನರಿಗಾಗಿ ಕೊಟ್ಟ ಮಾತಿನಂತೆ ನಡೆಯುತ್ತಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಕರ್ನಾಟಕಕ್ಕೆ ನಾವು ನೀಡಿರುವ ಮಾತು ಕೇವಲ ಘೋಷಣೆಯಲ್ಲ, ಅದು ನಮ್ಮ ಪಾಲಿಗೆ ಜಗತ್ತು ಎಂದು ಹೇಳಿದ್ದಾರೆ.
ಗುರುವಾರ ಬೆಳಗ್ಗೆ ಉಪ ಮುಖ್ಯಕಮಂತ್ರಿ ಡಿ.ಕೆ.ಶಿವಕುಮಾರ್ ಮಾಡಿದ್ದ ಪೋಸ್ಟ್ ಹಾಗೂ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಪೋಸ್ಟ್ ತೀವ್ರ ಚರ್ಚೆಗೆ ಹುಟ್ಟು ಹಾಕಿದೆ.