ಸೆ.15ರಿಂದ ಮಾಜಿ ದೇವದಾಸಿ, ಲಿಂಗತ್ವ ಅಲ್ಪಸಂಖ್ಯಾತರ ಮರು ಸಮೀಕ್ಷೆ: ಸಿಎಂ ಸಿದ್ದರಾಮಯ್ಯ
Photo:X/@CMofKarnataka
ಬೆಂಗಳೂರು: ರಾಜ್ಯಾದ್ಯಂತ ಇದೇ ಮೊದಲ ಬಾರಿಗೆ ಸೆ.15 ರಿಂದ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತ ಮತ್ತು 15 ಜಿಲ್ಲೆಗಳಲ್ಲಿ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಗುರುವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಲಿಂಗತ್ವ ಅಲ್ಪಸಂಖ್ಯಾತರ ಮೂಲಹಂತದ ಸಮೀಕ್ಷೆ ಮತ್ತು ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ಪ್ರಮುಖವಾಗಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ನಡೆಸಿ, ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪುನರ್ವಸತಿ ಕಲ್ಪಿಸಲಾಗುವುದು ಎಂದರು.
ಸಮೀಕ್ಷೆ ಕಾರ್ಯ ಕೈಗೊಳ್ಳಲು ಈಗಾಗಲೇ ಪೂರ್ವ ತಯಾರಿ ಕೈಗೊಂಡಿದ್ದು, ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಏಂಖಒಂಓI’ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದೆ. ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಗೆ ಸೇವಾ ಸಿಂಧೂ ಹಾಗೂ ಮೊಬೈಲ್ ಆ್ಯಪ್ ಮೂಲಕ ಪ್ರತ್ಯೇಕವಾಗಿ ಎರಡು ಸಮೀಕ್ಷೆಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆಯನ್ನು ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ನಡೆಸಲಾಗುತ್ತದೆ. ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಯನ್ನು 15 ಜಿಲ್ಲೆಗಳ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ನಡೆಸಲಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದವರ ಮೂಲಕವೇ ಸಮೀಕ್ಷೆ ಕಾರ್ಯ ಕೈಗೊಳ್ಳುತ್ತಿರುವುದು ಈ ಸಮೀಕ್ಷೆಯ ವಿಶೇಷತೆ. ಮಾಜಿ ದೇವದಾಸಿ ಮಹಿಳೆಯರ ಸಮೀಕ್ಷೆಯನ್ನು ದೇವದಾಸಿ ಪುನರ್ವಸತಿ ಯೋಜನಾ ಘಟಕದ ಅಧಿಕಾರಿ ಸಿಬ್ಬಂದಿಗಳು ಕೈಗೊಳ್ಳುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ, ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಾಬು ಸೇರಿದಂತೆ ಪ್ರಮುಖರಿದ್ದರು.
ಸಹಾಯವಾಣಿ: ಎರಡು ಸಮೀಕ್ಷೆಯಲ್ಲಿ ಭಾಗವಹಿಸಲು ಸಹಾಯವಾಣಿ ಸಂಖ್ಯೆ 1800 599 2025 ಅನ್ನು ಸಂಪರ್ಕಿಸಬಹುದು.