×
Ad

ಕರ್ನಾಟಕದಲ್ಲಿ ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೆ ತರುತ್ತೇವೆ : ಸಿಎಂ ಸಿದ್ದರಾಮಯ್ಯ

Update: 2025-04-18 23:16 IST

ಸಿದ್ದರಾಮಯ್ಯ, ರಾಹುಲ್‌ ಗಾಂಧಿ 

ಬೆಂಗಳೂರು : ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕಾನೂನು ಜಾರಿಗೆ ತರುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರೆ ನೀಡಿದ ನಂತರ, ಕರ್ನಾಟಕದಲ್ಲಿ ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೆ ತರುವ ತಮ್ಮ ಸರ್ಕಾರದ ಬದ್ಧತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಪುನರುಚ್ಚರಿಸಿದ್ದಾರೆ.

ಲೋಕಸಭೆಯ ವಿಪಕ್ಷ ನಾಯಕರೂ ಆಗಿರುವ ರಾಹುಲ್ ಗಾಂಧಿ ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರವು ಆದಷ್ಟು ಬೇಗ ಈ ಶಾಸನವನ್ನು ಜಾರಿಗೆ ತರಲಿದೆ ಎಂದು ಭರವಸೆ ನೀಡಿದ್ದಾರೆ.

"ಕರ್ನಾಟಕದಲ್ಲಿ ಯಾವುದೇ ವಿದ್ಯಾರ್ಥಿಯು ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ಎದುರಿಸದಂತೆ ನೋಡಿಕೊಳ್ಳಲು ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೆ ತರುವ ಸಂಕಲ್ಪದಲ್ಲಿ ನಮ್ಮ ಸರ್ಕಾರ ದೃಢವಾಗಿದೆ. ರೋಹಿತ್, ಪಾಯಲ್, ದರ್ಶನ್ ಮತ್ತು ಅಸಂಖ್ಯಾತ ಇತರರ ಕನಸುಗಳನ್ನು ಗೌರವಿಸಲು ನಾವು ಈ ಶಾಸನವನ್ನು ಆದಷ್ಟು ಬೇಗ ಜಾರಿಗೆ ತರುತ್ತೇವೆ", ಎಂದು ಅವರು "X" ನಲ್ಲಿನ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾನತೆಯ ದೃಷ್ಟಿಕೋನದ ಭಾರತದ ಸಾಕಾರಗೊಳಿಸುವತ್ತ ಇದು ಒಂದು ಹೆಜ್ಜೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿಯವರು, ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಎದುರಿಸಿದ ತಾರತಮ್ಯವನ್ನು ಉಲ್ಲೇಖಿಸಿದ್ದರು.ಸಂವಿಧಾನ ಶಿಲ್ಪಿ ಅಂಬೇಡ್ಕರ್ ಎದುರಿಸಿದ ತಾರತಮ್ಯವು ನಾಚಿಕೆಕೇಡು ಎಂದು ಹೇಳಿರುವ ರಾಹುಲ್ ಗಾಂಧಿ ಅವರು, ಭಾರತದ ಯಾವುದೇ ಮಗು ಈ ರೀತಿಯ ನೋವನ್ನು ಅನುಭವಿಸಬಾರದು ಎಂದು ಕಳಕಳ ವ್ಯಕ್ತಪಡಿಸಿದ್ದರು.

"ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇಂದಿಗೂ ದಲಿತ, ಆದಿವಾಸಿ ಮತ್ತು ಒಬಿಸಿ ಸಮುದಾಯಗಳ ಲಕ್ಷಾಂತರ ವಿದ್ಯಾರ್ಥಿಗಳು ಇಂತಹ ಕ್ರೂರ ತಾರತಮ್ಯವನ್ನು ಎದುರಿಸಬೇಕಾಗಿರುವುದು ನಾಚಿಕೆಗೇಡಿನ ಸಂಗತಿ" ಎಂದು ಗಾಂಧಿ ಹೇಳಿದ್ದರು.

"ರೋಹಿತ್ ವೇಮುಲಾ, ಪಾಯಲ್ ತಡ್ವಿ ಮತ್ತು ದರ್ಶನ್ ಸೋಲಂಕಿಯಂತಹ ಪ್ರತಿಭಾವಂತ ಯುವಕರ ಹತ್ಯೆಯು ಸ್ವೀಕಾರಾರ್ಹವಲ್ಲ. ಇದಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ. ಡಾ.ಬಿ.ಆರ್.ಅಂಬೇಡ್ಕರ್, ರೋಹಿತ್ ವೇಮುಲಾ ಮತ್ತು ಲಕ್ಷಾಂತರ ಇತರರು ಅನುಭವಿಸಿದ್ದು, ಭಾರತದ ಯಾವುದೇ ಮಗು ಎದುರಿಸದಂತೆ ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೆ ತರಬೇಕೆಂದು ನಾನು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇನೆ" ಎಂದು ರಾಹುಲ್ ಗಾಂಧಿಯವರು ಎ.16 ರಂದು ಕರ್ನಾಟಕ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

2016ರಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಜಾತಿ ಆಧಾರಿತ ತಾರತಮ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News