ಕಬ್ಬು ಬೆಳೆಗಾರರ ಸಮಸ್ಯೆ | ‘ಕೇಂದ್ರ ಸರಕಾರ ಮೂಲಭೂತ ಸಮಸ್ಯೆಯಿಂದ ತಪ್ಪಿಸಿಕೊಳ್ಳುತ್ತಿದೆ’ : ಪ್ರಹ್ಲಾದ್ ಜೋಶಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಪ್ರಹ್ಲಾದ್ ಜೋಶಿ/ಸಿದ್ದರಾಮಯ್ಯ
ಬೆಂಗಳೂರು : ಕೇಂದ್ರ ಸರಕಾರವು ಮೂಲಭೂತ ಸಮಸ್ಯೆಯಿಂದ ತಪ್ಪಿಸಿಕೊಳ್ಳುತ್ತಿದೆ. ಉತ್ಪಾದನಾ ವೆಚ್ಚ ಮತ್ತು ಕಬ್ಬು ಬೆಲೆಯ ವಾಸ್ತವ ಪರಿಸ್ಥಿತಿಯ ನಡುವಿನ ಅಗಾಧ ಅಂತರ, ಲಕ್ಷಾಂತರ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಬ್ಬು ಬೆಳೆಗೆ ಎಫ್‍ಆರ್‍ಪಿ ನಿಗದಿ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮಗೆ ಬರೆದ ಪತ್ರಕ್ಕೆ ಪ್ರತ್ಯುತ್ತರ ನೀಡಿರುವ ಅವರು, ಕೇಂದ್ರ ಸರಕಾರವು ಪ್ರತಿ ಕ್ವಿಂಟಾಲ್ ಕಬ್ಬು ಬೆಳೆಗೆ 355 ರೂ.(ಶೇ.10.25ರಷ್ಟು ಇಳುವರಿಗೆ) ಎಫ್‍ಆರ್‍ಪಿ ಘೋಷಿಸಿದೆ. ಇದನ್ನು ದೊಡ್ಡ ಸಾಧನೆ ಎಂದು ಪ್ರಚಾರ ಮಾಡಲಾಗುತ್ತಿದೆ ಮತ್ತು ಉತ್ಪಾದನಾ ವೆಚ್ಚದ ಮೇಲೆ ಶೇ.105.2ರಷ್ಟು ಲಾಭವಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಹೇಳಿಕೆ ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
2014ರಿಂದ ಗೊಬ್ಬರ, ಕಾರ್ಮಿಕ, ಸಾರಿಗೆ ಮತ್ತು ಇತರೆ ವೆಚ್ಚಗಳು ಎರಡು ಪಟ್ಟು ಹೆಚ್ಚಾಗಿದೆ, ಆದರೆ ಎಫ್‍ಆರ್‍ಪಿ ವಾರ್ಷಿಕ ಸಂಯುಕ್ತ ಬೆಳವಣಿಗೆಯ ದರ(ಸಿಎಜಿಆರ್)ದಲ್ಲಿ ಕೇವಲ ಶೇ. 4.47ರಷ್ಟು ಮಾತ್ರ ಹೆಚ್ಚಾಗಿದೆ. ಇದಲ್ಲದೆ, ಎನ್‍ಡಿಎ ಆಡಳಿತ ಕಾಲದಲ್ಲಿ ಎರಡು ವರ್ಷಗಳ ಕಾಲ ಎಫ್‍ಆರ್‍ಪಿ ಹೆಚ್ಚಿಸಿಲ್ಲ. ಇದರಿಂದ ರೈತರಿಗೆ ಪ್ರತಿ ಕ್ವಿಂಟಾಲ್‍ಗೆ ಸರಾಸರಿ 20 ರೂ.ನಷ್ಟ ಉಂಟಾಗುತ್ತಿರುವುದು ಎಲ್ಲರಿಗೂ ಗೊತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಯುಪಿಎ ಸರಕಾರದ ಕಾಲದಲ್ಲಿ ಎಫ್‍ಆರ್‍ಪಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು, ಆಗ ಸಿಎಜಿಆರ್ ಶೇ.12.96ರಷ್ಟಿತ್ತು. ಯುಪಿಎ ಅವಧಿಯಲ್ಲಿ ಇಳುವರಿ ಪ್ರಮಾಣವನ್ನು ಶೇ.9.5 ನಿಗದಿ ಮಾಡಲಾಗಿತ್ತು. ಆದರೆ, ಎನ್‍ಡಿಎ ಸರಕಾರ ಈ ಪ್ರಮಾಣವನ್ನು ಶೇ.10.25ಕ್ಕೆ ಹೆಚ್ಚಿಸಿದೆ. ಎಥನಾಲ್ ಮಿಶ್ರಣವು 2023ರಲ್ಲಿ ಶೇ.10ರಷ್ಟು ತಲುಪಿದೆ ಎಂದು ಹೇಳಿದರೂ, ಸ್ಥಿತಿಗತಿಗಳು ಪ್ರಚಾರಕ್ಕಿಂತ ಬಹಳ ದೂರದಲ್ಲಿವೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಡಿಸ್ಟಿಲರಿಗಳಿಂದ ಎಥನಾಲ್ ಸರಬರಾಜು 2022-23ರಲ್ಲಿ 38 ಕೋಟಿ ಲೀಟರ್‍ನಿಂದ 2024-25ರಲ್ಲಿ 47 ಕೋಟಿ ಲೀಟರ್‍ಗೆ ತಲುಪಿದೆ. ಆದರೆ ಸ್ಥಾಪಿತ ಸಾಮರ್ಥ್ಯ 270 ಕೋಟಿ ಲೀಟರ್ ಇದೆ. ಎಥನಾಲ್ ಮಿಶ್ರಣದಿಂದ ಉಂಟಾದ ಲಾಭವನ್ನು ರೈತರಿಗೆ ಏಕೆ ನೀಡುತ್ತಿಲ್ಲ? ಎಥನಾಲ್ ಮಿಶ್ರಣದಿಂದ ಸಕ್ಕರೆ ಕ್ಷೇತ್ರದ ಆದಾಯ ಸಾಮರ್ಥ್ಯವು ಗಣನೀಯವಾಗಿ ಹೆಚ್ಚಿರುವಾಗ, ರೈತರು ಆ ಲಾಭದಲ್ಲಿ ಪಾಲುದಾರರಾಗುವುದು ನ್ಯಾಯ ಸಮ್ಮತವಾಗಿದೆ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ.
2013ರಲ್ಲಿ ಎಥನಾಲ್ ಮಿಶ್ರಣವು ಶೇ.5ಕ್ಕಿಂತ ಕಡಿಮೆ ಮತ್ತು ಇಳುವರಿ ದರ ಶೇ.9.5 ಆಗಿದ್ದರೂ, ಯುಪಿಎ ಅವಧಿಯಲ್ಲಿ ಎಫ್‍ಆರ್‍ಪಿ ಶೇ.12.96ರಷ್ಟು ಇತ್ತು. ಆದರೆ ಈಗ, ಎಥನಾಲ್ ಮಿಶ್ರಣವು ಸುಮಾರು ಶೇ.20ರಷ್ಟು ಮತ್ತು ಇಳುವರಿ ದರ ಶೇ.10.25ರಷ್ಟು ಆಗಿರುವಾಗ, ಸಿಎಜಿಆರ್ ಕೇವಲ ಶೇ.3.8ಕ್ಕೆ ಇಳಿದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ದುರದೃಷ್ಟವಶಾತ್, ಕೇಂದ್ರ ಸರಕಾರವು ಈ ನ್ಯಾಯಸಮ್ಮತ ಹಂಚಿಕೆಯನ್ನು ಖಚಿತಪಡಿಸುವ ವ್ಯವಸ್ಥೆಯನ್ನು ರೂಪಿಸಿಲ್ಲ. ಅದರ ಪರಿಣಾಮವಾಗಿ, ರೈತರು ಅವೈಜ್ಞಾನಿಕ ಎಫ್‍ಆರ್‍ಪಿ ಮತ್ತು ಇಳುವರಿ ದರಗಳಿಗೆ ಒಳಪಟ್ಟು, ಉತ್ತಮ ಬೆಳೆ ಬೆಳೆಯುತ್ತಿದ್ದರೂ ದುರ್ಬಲ ಸ್ಥಿತಿಯಲ್ಲೆ ಉಳಿಯುವಂತಾಗಿದೆ ಎಂದು ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರವು ಸಕ್ಕರೆಗಾಗಿ ಹೊಸ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ)ವ್ಯವಸ್ಥೆಯನ್ನು ರೂಪಿಸಬೇಕು. ಗೃಹೋಪಯೋಗಿ ಮತ್ತು ವಾಣಿಜ್ಯ ಬಳಕೆಯನ್ನು ಪ್ರತ್ಯೇಕವಾಗಿ ವರ್ಗೀಕರಿಸುವ ಮೂಲಕ, ವಾಣಿಜ್ಯ ಮಾರಾಟದಿಂದ ದೊರೆಯುವ ಹೆಚ್ಚಿನ ಆದಾಯವು ರೈತರಿಗೆ ನೀಡುವ ಬೆಲೆಯಲ್ಲಿ ಕಂಡು ಬರಬೇಕು ಎಂದಿರುವ ಮುಖ್ಯಮಂತ್ರಿ, ನೀವು ನಿಮ್ಮ ಪತ್ರದಲ್ಲಿ ಕೇಂದ್ರ ಸರಕಾರವು ಸಕ್ಕರೆ ಕಾರ್ಖಾನೆಗಳಿಗೆ ಮಹತ್ತರ ಹಣಕಾಸು ನೆರವು ಮತ್ತು ಪ್ರೋತ್ಸಾಹ ನೀಡಿದೆಯೆಂದು ಹೇಳಿದ್ದೀರಿ. ಅದು ನಿಜವಾದರೆ, ಕರ್ನಾಟಕದಲ್ಲಿ ನೀಡಿರುವ ಆ ನೆರವಿನ ಕಾರ್ಖಾನೆವಾರು ಮಾಹಿತಿಯನ್ನು ಹಂಚಿಕೊಳ್ಳಿ ಎಂದು ಕೋರಿದ್ದಾರೆ.
ಈ ವಿಷಯದಲ್ಲಿ ಪಾರದರ್ಶಕತೆ ಅತ್ಯವಶ್ಯಕ, ಹಾಗಾದರೆ ರಾಜ್ಯ ಸರಕಾರ ಮತ್ತು ರೈತರ ಪ್ರತಿನಿಧಿಗಳು ಈ ಪ್ರಯೋಜನಗಳು ನಿಜವಾಗಿಯೂ ಸಕ್ಕರೆ ಕಾರ್ಖಾನೆಗಳಿಗೆ ಹಾಗೂ ರೈತರಿಗೆ ಸಿಕ್ಕಿವೆಯೇ ಎಂಬುದನ್ನು ಪರಿಶೀಲಿಸಬಹುದು. ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಲು ಶುಕ್ರವಾರ(ನ.7ರಂದು) ಕರೆದಿದ್ದ ಸಭೆಗೆ ಒಬ್ಬ ಕೇಂದ್ರ ಸಚಿವರು ಹಾಜರಾಗದಿದ್ದದ್ದು ವಿಷಾದನೀಯ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ರಾಜ್ಯ ಸರಕಾರವು ಸೀಮಿತ ಸಂಪನ್ಮೂಲಗಳಿಂದ ರೈತರಿಗೆ ಸಾಧ್ಯವಾದ ಎಲ್ಲ ರೀತಿಯ ಸಹಾಯ ಒದಗಿಸುತ್ತಿದ್ದರೂ, ಕೇಂದ್ರ ಸರಕಾರವು ನಿರಂತರವಾಗಿ ಕರ್ನಾಟಕದತ್ತ ಪಕ್ಷಪಾತದ ಧೋರಣೆಯನ್ನು ತೋರಿಸಿದೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕವು 2 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ತೆರಿಗೆ ಹಂಚಿಕೆ ಮತ್ತು ಅನುದಾನಗಳಲ್ಲಿ ತನ್ನ ನ್ಯಾಯಯುತ ಹಕ್ಕಿನಿಂದ ವಂಚಿತವಾಗಿದೆ ಎಂದು ಹಣಕಾಸು ಆಯೋಗದ ಶಿಫಾರಸ್ಸುಗಳು ಹೇಳುತ್ತವೆ ಎಂದು ಅವರು ಬೊಟ್ಟು ಮಾಡಿದ್ದಾರೆ.
ಪ್ರತಿ ವರ್ಷ, ತೆರಿಗೆ ಹಂಚಿಕೆಯ ಕಡಿತದಿಂದಾಗಿ ಕರ್ನಾಟಕವು ಸುಮಾರು 25 ಸಾವಿರ ಕೋಟಿ ರೂ.ನಷ್ಟ ಅನುಭವಿಸುತ್ತಿದೆ. ಕೇಂದ್ರ ಸರಕಾರವು ರೈತರ ಉತ್ಪಾದನಾ ವೆಚ್ಚ, ಹಂಗಾಮಿನ ನಷ್ಟ ಮತ್ತು ಮಾರುಕಟ್ಟೆಯ ಸ್ಥಿತಿಗಳನ್ನು ಪರಿಗಣಿಸದೆ ಕೇವಲ ಕಾಗದದ ಮೇಲೆ ಲಾಭದ ಅಂಕಿ ಅಂಶಗಳನ್ನು ಉಲ್ಲೇಖಿಸುವುದು, ರೈತರ ಕಷ್ಟವನ್ನು ಪರಿಹರಿಸುವಂತಾಗುವುದಿಲ್ಲ ಎಂದು ಅವರು ಕಿಡಿಗಾರಿದ್ದಾರೆ.
ರೈತರಿಗೆ ನ್ಯಾಯಯುತ ಬೆಲೆ ದೊರಕಬೇಕು ಎಂಬುದು ನಮ್ಮ ಒತ್ತಾಯ. ಕೇಂದ್ರ ಸರಕಾರವು ಕೂಡಲೆ ಎಫ್‍ಆರ್‍ಪಿ ನಿಗದಿಗೊಳಿಸುವ ವಿಧಾನವನ್ನು ಪುನರ್‍ವಿಮರ್ಶೆ ಮಾಡಬೇಕು. ಉತ್ಪಾದನಾ ವೆಚ್ಚದ ಆಧಾರದ ಮೇಲೆ ಮತ್ತು ರೈತರ ಜೀವನ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಎಫ್‍ಆರ್‍ಪಿ ನಿಗದಿಪಡಿಸಬೇಕು ಎಂದು ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ.
ಕಬ್ಬು ಬೆಲೆ ನಿಗದಿಗೆ ಸಂಬಂಧಿಸಿದ ಎಲ್ಲ ನೀತಿ ನಿರ್ಧಾರಗಳಲ್ಲಿ ರಾಜ್ಯ ಸರಕಾರದ ಅಭಿಪ್ರಾಯವನ್ನು ಪರಿಗಣಿಸುವುದು ಅಗತ್ಯ. ಕೇಂದ್ರ ಸರಕಾರದ ಏಕಪಕ್ಷೀಯ ಕ್ರಮಗಳು ರಾಜ್ಯದ ರೈತರ ಜೀವನೋಪಾಯಕ್ಕೆ ಅಪಾಯ ಉಂಟು ಮಾಡುತ್ತವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.