×
Ad

ವಿಶ್ವದ ಎರಡನೇ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜವನ್ನು ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Update: 2025-12-09 11:49 IST

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.9: ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಮುನ್ನೆಲೆಗೆ ತರಲಾಯಿತು. ತ್ರಿವರ್ಣ ಧ್ವಜ ಕೇವಲ ಖಾದಿಯ ವಸ್ತ್ರವಲ್ಲ, ಇದು ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ಮಂಗಳವಾರ ಸುವರ್ಣ ವಿಧಾನಸೌಧದ ಭವ್ಯ ಮೆಟ್ಟಿಲುಗಳ ವಿಶ್ವದ ಎರಡನೆ ಅತಿದೊಡ್ಡ ಖಾದಿ ರಾಷ್ಟ್ರಧ್ವಜವನ್ನು(75 ಅಡಿ ಉದ್ದ ಹಾಗೂ 55 ಅಡಿ ಅಗಲ) ಚರಕ ತಿರುಗಿಸುವ ಮೂಲಕ ಅನಾವರಣಗೊಳಿಸಿ ಅವರು ಮಾತನಾಡಿದರು.

ಈ ಧ್ವಜ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳು ಮತ್ತು ಅಶೋಕ ಚಕ್ರವನ್ನು ಒಳಗೊಂಡಿದೆ. ದೇಶದ ಸ್ವಾಭಿಮಾನ, ಆರ್ಥಿಕತೆ ಮತ್ತು ತ್ಯಾಗ ಬಲಿದಾನ ಹಾಗೂ ಶಾಂತಿಯ ಸಂದೇಶವನ್ನು ಸಾರುವ ಹಾಗೂ ಭಾರತೀಯರಿಗೆ ರಾಷ್ಟ್ರಭಕ್ತಿಯನ್ನು ಸಾರುವ ಸಂದೇಶವನ್ನು ಈ ಧ್ವಜ ನೀಡುತ್ತದೆ ಎಂದು ಅವರು ಹೇಳಿದರು.

ನಮ್ಮ ರಾಷ್ಟ್ರದ ತ್ರಿವರ್ಣ ಧ್ವಜವನ್ನು ಗೌರವಿಸಿ ಹೆಮ್ಮೆಯಿಂದ ಕಾಣಬೇಕು. ಪ್ರತಿಯೊಬ್ಬರೂ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು. ಈ ಸಂದರ್ಭದಲ್ಲಿ ರಾಷ್ಟ್ರಕ್ಕಾಗಿ ತ್ಯಾಗ ಬಲಿದಾನ, ಹೋರಾಟ ಮಾಡಿದವರನ್ನು ಸ್ಮರಿಸುವುದು ಅಗತ್ಯ. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಸ್ವಾತಂತ್ರ ಹೋರಾಟ ನಡೆಯಿತು ಎಂದು ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿ ವಹಿಸಿದ್ದರು. ಇದು ನಡೆದು ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಕಳೆದ ವರ್ಷ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಸುವರ್ಣ ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೆ ಅತಿ ದೊಡ್ಡ ಖಾದಿ ಬಟ್ಟೆಯ ರಾಷ್ಟ್ರಧ್ವಜ ಅನಾವರಣಕ್ಕೆ ಶ್ರಮಿಸಿ ಉತ್ತಮ ಕಾರ್ಯ ಮಾಡಿದ ಸ್ಪೀಕರ್ ಯು.ಟಿ.ಖಾದರ್ ಮತ್ತು ಅವರ ತಂಡದವರಿಗೆ ಮತ್ತು ಈ ಧ್ವಜ ನೇಯ್ಗೆ ಗೆ ಶ್ರಮಿಸಿದ ವಿನೋದ್ ಕುಮಾರ್ ರೇವಪ್ಪ ಬೊಮ್ಮಣ್ಣವರ ಅವರಿಗೆ ಸರಕಾರದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸ್ಪೀಕರ್ ಯು.ಟಿ.ಖಾದರ್ ಮಾತನಾಡಿದರು.

ಈ ಸಂದರ್ಭದಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಶಾಸಕರಾದ ಅಶೋಕ್ ಪಟ್ಟಣ್, ತಮ್ಮಯ್ಯ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ಇತರರು ಇದ್ದರು.

ರಾಷ್ಟ್ರಧ್ವಜ ನೇಯ್ಗೆ ಕಾರ್ಯಕ್ಕೆ ಶ್ರಮಿಸಿದ ಕಲಬುರಗಿ ಜಿಲ್ಲೆಯ ಕಮಲಾಪುರದ ವಿನೋದ್ ಕುಮಾರ್ ರೇವಪ್ಪ ಬಮ್ಮಣ್ಣವರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.

ರಾಷ್ಟ್ರಧ್ವಜ ಅನಾವರಣದ ಸಂದರ್ಭದಲ್ಲಿ ವಂದೇ ಮಾತರಂ, ರಾಷ್ಟ್ರಗೀತೆ ಮೊಳಗಿತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಸ್ಮರಣಾರ್ಥ ಇತ್ತೀಚೆಗೆ ನಡೆದ ಗಾಂಧಿ ಭಾರತ ಕಾರ್ಯಕ್ರಮ ನಡೆದ ಬೆನ್ನಲ್ಲೆ, ಬೆಳಗಾವಿಯಲ್ಲಿ ಮತ್ತೊಂದು ಮಹತ್ವದ ರಾಷ್ಟ್ರಪ್ರೇಮದ ಕಾರ್ಯಕ್ರಮ ನೆರವೇರುತ್ತಿದ್ದಂತೆ ಅಲ್ಲಿ ಸೇರಿದ್ದ ಜನಸ್ತೋಮ ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿತು.

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News