×
Ad

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಮಲಯಾಳಂ ಭಾಷೆಯನ್ನು ಹೇರುವ ಕ್ರಮಕ್ಕೆ ಅಸಮಾಧಾನ

Update: 2026-01-09 21:42 IST

 ಸಿದ್ದರಾಮಯ್ಯ/ಪಿಣರಾಯಿ ವಿಜಯನ್‌(PTI)

ಬೆಂಗಳೂರು : ಕೇರಳ ಸರಕಾರವು ‘ಮಲಯಾಳಿ ಭಾಷಾ ಮಸೂದೆ-2025’ ಅನ್ನು ಅಂಗೀಕರಿಸಿದರೆ, ಸಂವಿಧಾನಾತ್ಮಕವಾಗಿ ನಮಗೆ ದೊರೆತಿರುವ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಮತ್ತು ಒಕ್ಕೂಟದ ವ್ಯವಸ್ಥೆಯ ಬಹುತ್ವ ಮನೋಭಾವವನ್ನು ರಕ್ಷಿಸುವ ಹಕ್ಕುಗಳನ್ನು ಕಳೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.

ಶುಕ್ರವಾರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿರುವ ಅವರು, ಕೇರಳ ಮತ್ತು ಕರ್ನಾಟಕ ರಾಜ್ಯಗಳು ಕೇವಲ ಭೌಗೋಳಿಕತೆಯಿಂದ ಮಾತ್ರವಲ್ಲದೆ, ಆಳವಾದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಮಾನವೀಯ ಸಂಬಂಧಗಳಿಂದ ಬೆಸೆದುಕೊಂಡ ರಾಜ್ಯಗಳಾಗಿವೆ. ಎರಡೂ ರಾಜ್ಯಗಳು ಸುದೀರ್ಘ ಸಂಬಂಧವನ್ನು ಹೊಂದಿದ್ದು, ಸಾಂವಿಧಾನಿಕ ಜವಾಬ್ದಾರಿಯ ಮನೋಭಾವದಿಂದ ಈ ಪತ್ರವನ್ನು ಬರೆದಿದ್ದಾರೆ ಎಂದು ಹೇಳಿದ್ದಾರೆ.

ಗಡಿ ಜಿಲ್ಲೆಗಳಾದ ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂವನ್ನು ಕಡ್ಡಾಯವಾಗಿ ಪ್ರಥಮ ಭಾಷೆಯನ್ನಾಗಿ ಕಡ್ಡಾಯಗೊಳಿಸುವ ಉದ್ದೇಶಿತ ಮಲಯಾಳಂ ಭಾಷಾ ಮಸೂದೆಯು ಕಳವಳಕಾರಿಯಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಭಾರತದ ನಾಗರಿಕತೆಯ ಶಕ್ತಿ ಯಾವಾಗಲೂ ಬಹುತ್ವದ ಮೇಲೆ ನಿಂತಿದೆ. ನಮ್ಮ ದೇಶದಲ್ಲಿ ಭಾಷೆಗಳು ಪ್ರವರ್ಧಮಾನಕ್ಕೆ ಬಂದಿರುವುದು ಬಲವಂತದಿಂದಲ್ಲ, ಪರಸ್ಪರ ಗೌರವ ಮತ್ತು ಸಹಬಾಳ್ವೆಯಿಂದ ಬಂದಿವೆ. ಮಲಯಾಳಂ, ಕನ್ನಡ, ತುಳು, ಬ್ಯಾರಿ ಮತ್ತು ಇತರ ಭಾಷೆಗಳು ಸಾಮರಸ್ಯದಿಂದ ದೈನಂದಿನ ಜೀವನ, ಶಿಕ್ಷಣ ಮತ್ತು ತಲೆಮಾರುಗಳ ಗುರುತನ್ನು ರೂಪಿಸಿರುವ ಕಾಸರಗೋಡಿನಂತಹ ಗಡಿ ಪ್ರದೇಶಗಳು ಈ ನೀತಿಯ ಜೀವಂತ ಉದಾಹರಣೆಗಳಾಗಿವೆ ಎಂದು ಅವರು ಹೇಳಿದ್ದಾರೆ.

ಕಾಸರಗೋಡಿನ ಜನಸಂಖ್ಯೆಯ ಹೆಚ್ಚಿನ ಜನರು ಕನ್ನಡವನ್ನು ಅವಲಂಬಿಸಿದ್ದಾರೆ. ಕನ್ನಡದಲ್ಲಿ ಶಿಕ್ಷಣವನ್ನು ಪಡೆಯಲು ಬಯಸುತ್ತಾರೆ ಎಂಬುದು ಅಂಗೀಕರಿಸಲ್ಪಟ್ಟ ನೆಲದ ವಾಸ್ತವವಾಗಿದೆ. ಕರ್ನಾಟಕದೊಂದಿಗೆ ದಶಕಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂವಾದದಲ್ಲಿ ಈ ಆದ್ಯತೆಯು ಸ್ವಾಭಾವಿಕವಾಗಿ ವಿಕಸನಗೊಂಡಿದೆ. ಈ ವಾಸ್ತವವನ್ನು ಗೌರವಿಸುವುದರಿಂದ ಮಲಯಾಳಂನ ಗೌರವ ಕಡಿಮೆಯಾಗುವುದಿಲ್ಲ; ಬದಲಿಗೆ, ಇದು ಭಾರತದ ಬಹುತ್ವವನ್ನು ಬಲಪಡಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಮ್ಮ ಸಂವಿಧಾನವು ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆಯನ್ನು ನೀಡುತ್ತದೆ. ಸಂವಿಧಾನದ 29 ಮತ್ತು 30 ಪರಿಚ್ಛೇದಗಳು ಭಾಷೆಯನ್ನು ಸಂರಕ್ಷಿಸುವ ಮತ್ತು ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುವ ಹಕ್ಕನ್ನು ಖಾತರಿಪಡಿಸುತ್ತದೆ. 350(ಎ) ಪರಿಚ್ಛೇದವು ಮಾತೃಭಾಷೆಯಲ್ಲಿ ಶಿಕ್ಷಣಕ್ಕಾಗಿ ಸೌಲಭ್ಯಗಳನ್ನು ಕಡ್ಡಾಯಗೊಳಿಸುತ್ತದೆ. 350(ಬಿ) ಅಲ್ಪಸಂಖ್ಯಾತರ ಭಾಷಾ ಹಿತಾಸಕ್ತಿಗಳನ್ನು ರಕ್ಷಿಸುವ ಹಕ್ಕು ನೀಡುತ್ತದೆ. ಹೀಗಾಗಿ ಯಾವುದೇ ಶಾಸಕಾಂಗ ಕ್ರಮವು ಸಾಂವಿಧಾನಿಕ ಕಾನೂನುಬದ್ಧತೆಯನ್ನು ಮಾತ್ರವಲ್ಲದೆ, ಸಾಂವಿಧಾನಿಕ ನೈತಿಕತೆಯನ್ನೂ ಹೊಂದಿರಬೇಕು ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಸುಧಾರಣೆ, ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಚಿಂತನೆಯಿಂದ ರೂಪುಗೊಂಡ ಭಾಷೆಯಾದ ಕನ್ನಡದ ಬಗ್ಗೆ ಕರ್ನಾಟಕವು ಅಪಾರವಾದ ಹೆಮ್ಮೆಯನ್ನು ಹೊಂದಿದೆ. ಅದೇ ಸಮಯದಲ್ಲಿ, ಒಬ್ಬರ ಭಾಷೆಯ ಪ್ರಚಾರವು ಇನ್ನೊಬ್ಬರ ಮೇಲೆ ಹೇರಿಕೆಯಾಗಬಾರದು ಎಂಬ ತತ್ವವನ್ನು ನಾವು ಯಾವಾಗಲೂ ಎತ್ತಿಹಿಡಿದಿದ್ದೇವೆ. ಈ ನಂಬಿಕೆಯು ನಮ್ಮ ನೀತಿಗಳು ಮತ್ತು ಸಾಮರಸ್ಯಕ್ಕೆ ನಮ್ಮ ಬದ್ಧತೆಯನ್ನು ಮಾರ್ಗದರ್ಶನ ಮಾಡಿದೆ ಎಂದು ಅವರು ಹೇಳಿದ್ದಾರೆ.

ಹೀಗಾಗಿ ಸಂವಿಧಾನತ್ಮಕ ಹಕ್ಕುಗಳನ್ನು ಕಸಿದುಕೊಳ್ಳುವ ‘ಮಲಯಾಳಿ ಭಾಷಾ ಮಸೂದೆ-2025’ ಅನ್ನು ಕರ್ನಾಟಕ ಸರಕಾರವು ವಿರೋಧಿಸುತ್ತದೆ. ಈ ನಿಟ್ಟಿನಲ್ಲಿ ಮಸೂದೆಯನ್ನು ಜಾರಿ ಮಾಡುವ ಮುನ್ನ ಕೇರಳದ ಭಾಷಾ ಅಲ್ಪಸಂಖ್ಯಾತ ಸಮುದಾಯಗಳು, ಶಿಕ್ಷಣತಜ್ಞರು ಮತ್ತು ನೆರೆಯ ರಾಜ್ಯಗಳೊಂದಿಗೆ ಚರ್ಚೆ ಮಾಡಬೇಕು. ಮಸೂದೆಯನ್ನು ಮರುಪರಿಶೀಲಿಸಬೇಕು. ಪ್ರತಿ ಭಾಷೆಯ ಮತ್ತು ಪ್ರತಿ ನಾಗರಿಕನ ಘನತೆಯನ್ನು ಕಾಪಾಡುವುದರೊಂದಿಗೆ ಭಾರತದ ಏಕತೆಯನ್ನು ಎತ್ತಿ ಹಿಡಿಯಬೇಕು ಎಂದು ಸಿದ್ದರಾಮಯ್ಯ ಕೇರಳ ಸರಕಾರವನ್ನು ಒತ್ತಾಯಿಸಿದ್ದಾರೆ.

ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ, ಭಾಷೆ ಕೇವಲ ಶೈಕ್ಷಣಿಕ ಆಯ್ಕೆಯಲ್ಲ; ಇದು ಗುರುತು, ಘನತೆ ಮತ್ತು ಅವಕಾಶದ ಪ್ರವೇಶ. ಒಂದೇ ಭಾಷಾ ಮಾರ್ಗವನ್ನು ಒತ್ತಾಯಿಸುವ ಯಾವುದೇ ನೀತಿಯು ಮಕ್ಕಳ ಮೇಲೆ ಅನಗತ್ಯ ಹೊರೆಯನ್ನು ಹಾಕಿ ಅಪಾಯವನ್ನುಂಟು ಮಾಡುತ್ತದೆ. ಅಲ್ಪಸಂಖ್ಯಾತರು ನಡೆಸುವ ಶಿಕ್ಷಣ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ. ಈ ಸಮುದಾಯಗಳಿಗೆ ನಂಬಿಕೆ ಮತ್ತು ನಿರಂತರತೆಯೊಂದಿಗೆ ಸೇವೆ ಸಲ್ಲಿಸಿದ ದೀರ್ಘಕಾಲೀನ ಶೈಕ್ಷಣಿಕ ಪರಿಸರ ವ್ಯವಸ್ಥೆಗಳನ್ನು ಅಸ್ಥಿರಗೊಳಿಸುತ್ತದೆ.

ಸಿದ್ದರಾಮಯ್ಯ, ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News