×
Ad

ಕೆಂಪು ಮೆಣಸಿನಕಾಯಿ ಬೆಳೆಯುವವರಿಗೆ ಬೆಲೆ ಕೊರತೆ ಯೋಜನೆ ವಿಸ್ತರಿಸಿ: ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ

Update: 2025-03-11 19:33 IST

ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ (File Photo:X/@CMofKarnataka)

ಬೆಂಗಳೂರು: ಬೆಲೆ ಕುಸಿತದ ಹಿನ್ನೆಲೆಯಲ್ಲಿ ಸಂಕಷ್ಟ ಸಿಲುಕಿರುವ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಎಂಐಎಸ್‍ಯಡಿ ಬೆಲೆ ಕೊರತೆ ಪಾವತಿ ಯೋಜನೆಯನ್ನು ಕರ್ನಾಟಕ ರಾಜ್ಯದ ಕೆಂಪು ಮೆಣಸಿನಕಾಯಿ ಬೆಳೆಗಾರರಿಗೂ ವಿಸ್ತರಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಮಂಗಳವಾರ ಪ್ರಧಾನಿ ಮೋದಿ ಮತ್ತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟದ ಪ್ರದೇಶದಲ್ಲಿ ಕೆಂಪು ಮೆಣಸಿನಕಾಯಿ ಬೆಳೆದಿರುವ ರೈತರು ದರ ಕುಸಿತದಿಂದಾಗಿ ಕಂಗೆಟ್ಟಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ರೈತರು ಬೆಳೆದ ಕೆಂಪು ಮೆಣಸಿನಕಾಯಿಗೆ ಎಂಐಎಸ್ ಅಡಿಯಲ್ಲಿ ಬೆಲೆ ಕೊರತೆ ಪಾವತಿ (ಪಿಡಿಪಿ) ಯೋಜನೆಯನ್ನು ಕೇಂದ್ರ ಸರಕಾರ ಅನುಮೋದಿಸಿದೆ. ಉತ್ಪಾದನೆಯ ಶೇ.25ರ ವರೆಗಿನ ವ್ಯಾಪ್ತಿಯೊಂದಿಗೆ ಕ್ವಿಂಟಾಲ್‍ಗೆ 11,781 ರೂ.ಕನಿಷ್ಠ ಮಧ್ಯಸ್ಥಿಕೆ ಬೆಲೆ (ಎಂಐಪಿ)ಯನ್ನು ನಿಗದಿಪಡಿಸಿದೆ. ಅದನ್ನು ಕರ್ನಾಟಕದ ರೈತರಿಗೂ ವಿಸ್ತರಿಸಬೇಕು ಎಂದು ಕೋರಿದ್ದಾರೆ.

ಕರ್ನಾಟಕದಲ್ಲಿ ಗುಂಟೂರು ಮೆಣಸಿನಕಾಯಿ ಉತ್ಪದನಾ ವೆಚ್ಚವನ್ನು ಕ್ವಿಂಟಾಲ್‍ಗೆ 12,675 ರೂ.ಗಳನ್ನು ಕೃಷಿ ಬೆಲೆ ಆಯೋಗ ನಿಗದಿಪಡಿಸಿದೆ. ಆದರೆ, ರೈತರು ಅದನ್ನು ಈಗ ಕ್ವಿಂಟಾಲ್‍ಗೆ 8,300 ರೂ.ನಂತೆ ಮಾರಾಟ ಮಾಡುವ ಸ್ಥಿತಿ ಬಂದಿದೆ. ಇದರಿಂದ ಬೆಳೆಗಾರರು ನಷ್ಟ ಅನುಭಸುತ್ತಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಗಮನ ಸೆಳೆದಿದ್ದಾರೆ.

ದೇಶದ ಅತ್ಯಂತ ಹಿಂದುಳಿದ ಮತ್ತು ಬರ ಪೀಡಿತ ಪ್ರದೇಶವೂ ಆಗಿರುವ ಕಲ್ಯಾಣ ಕರ್ನಾಟಕದ ಪ್ರದೇಶದಲ್ಲಿ ಕೆಂಪು ಮೆಣಸಿನಕಾಯಿ ಕೃಷಿಯನ್ನು ಅವಲಂಬಿಸಿರುವ ಸಾವಿರಾರು ರೈತರು ಇದ್ದಾರೆ. ಹೀಗಾಗಿ ಆಂಧ್ರಕ್ಕೆ ನೀಡಿದಂತೆ ಕರ್ನಾಟಕ ರಾಜ್ಯಕ್ಕೂ ಬೆಲೆ ಕೊರತೆ ಪಾವತಿ ಯೋಜನೆ ವಿಸ್ತರಣೆ ಮಾಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News