ಕಾಮೆಡ್-ಕೆ ನಡೆಸುವ ಯುಜಿಸಿಟಿ ಫಲಿತಾಂಶ ಪ್ರಕಟ
ಸಾಂದರ್ಭಿಕ ಚಿತ್ರ
ಬೆಂಗಳೂರು : ಕರ್ನಾಟಕದ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟವು(ಕಾಮೆಡ್-ಕೆ) ಅಂಡರ್ ಗ್ರಾಜುಯೇಟ್ ಪ್ರವೇಶ ಪರೀಕ್ಷೆ(ಯುಜಿಸಿಟಿ) ಫಲಿತಾಂಶ 2024 ಶುಕ್ರವಾರದಂದು ಪ್ರಕಟಿಸಿದ್ದು, ಬೆಂಗಳೂರಿನ ಬಾಲಸತ್ಯ ಸರವಣನ್ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಪರೀಕ್ಷೆಯಲ್ಲಿ ಮೊದಲ 10 ರ‍್ಯಾಂಕ್ ಪಡೆದವರಲ್ಲಿ 8 ಅಭ್ಯರ್ಥಿಗಳು ಕರ್ನಾಟಕದವರೇ ಆಗಿದ್ದಾರೆ. ಈ ವರ್ಷ ಮೇ 12 ರಂದು ಪರೀಕ್ಷೆಯನ್ನು ನಡೆಸಲಾಯಿತು. ಸುಮಾರು 1.2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಹಿಂದಿನ ವರ್ಷದ ಫಲಿತಾಂಶದ ಅಂಕಿ-ಅಂಶಗಳಿಗೆ ಹೋಲಿಸಿದರೆ, ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.
ರಾಜ್ಯದ ಬಾಲಸತ್ಯ ಸರವಣನ್ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ದೇವಾಂಶ್ ತ್ರಿಪಾಠಿ, ಸನಾ ತಬಸ್ಸುಮ್, ಪ್ರಕೇತ್ ಗೋಯೆಲ್ ನಂತರದ ಸ್ಥಾನದಲ್ಲಿದ್ದು, ಇವರೆಲ್ಲರೂ ಕರ್ನಾಟಕದವರೇ ಆಗಿದ್ದಾರೆ. ಐದನೆ ಸ್ಥಾನದಲ್ಲಿರುವ ಮಾನಸ್ ಸಿಂಗ್ ರಜಪೂತ ಅವರು ಹಿಮಾಚಲ ಪ್ರದೇಶ, ಗಾನಿಪಿಸೆಟ್ಟಿ ನಿಸ್ಚಲ್ ಅವರು ಆಂಧ್ರಪ್ರದೇಶದವರಾಗಿದ್ದು, ನಂತರ ಸ್ಥಾನಗಳಲ್ಲಿ ಕರ್ನಾಟಕದ ಅಭ್ಯರ್ಥಿಗಳೇ ಇದ್ದಾರೆ.
ಫಲಿತಾಂಶವನ್ನು ಕಾಮೆಡ್ ಕೆನ ಅಧಿಕೃತ ವೆಬ್‍ಸೈಟ್ comedk.org ನಲ್ಲಿ ಪರಿಶೀಲನೆ ಮಾಡಬಹುದು. ಪ್ರವೇಶ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ತಮ್ಮ ರ‍್ಯಾಂಕ್ ಕಾರ್ಡ್‍ಗಳ ಸಂಖ್ಯೆಯನ್ನು ದಾಖಲಿಸಿ ಸ್ಕೋರ್ ಕಾರ್ಡ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು.
ಸ್ಕೋರ್ ಕಾರ್ಡ್ ಹೆಸರು ಜೊತೆಗೆ ಅರ್ಜಿ ಅಥವಾ ನೋಂದಣಿ ಸಂಖ್ಯೆ, ಜನ್ಮ ದಿನಾಂಕ, ಪರೀಕ್ಷಾ ಪ್ರವೇಶ ಟಿಕೆಟ್ ಸಂಖ್ಯೆ, ವರ್ಗ, ಆಯ್ದ ಕೋರ್ಸ್,ಫೋಟೋ ಐಡಿ, ಇತರ ವಿವರಗಳು, ಪಡೆದ ಸ್ಕೋರ್ ಮತ್ತು ಪಡೆದ ಶ್ರೇಣಿಯಂತಹ ವಿವರಗಳನ್ನು ಒಳಗೊಂಡಿರುತ್ತದೆ. ಫಲಿತಾಂಶಗಳಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ, ಅಭ್ಯರ್ಥಿಗಳು ತಕ್ಷಣದ ತಿದ್ದುಪಡಿಗಾಗಿ ಪರೀಕ್ಷಾ ಪ್ರಾಧಿಕಾರವನ್ನು ತಕ್ಷಣವೇ ಸಂಪರ್ಕಿಸಬಹುದು.
ಈ ವರ್ಷವೂ ಕೌನ್ಸೆಲಿಂಗ್ ಅನ್ನು ಆನ್‍ಲೈನ್‍ನಲ್ಲಿ ನಡೆಸಲಾಗುವುದು. ವಿಧ್ಯಾರ್ಥಿಗಳು ತಮ್ಮ ಲಾಗಿನ್ ಮೂಲಕ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‍ಲೋಡ್ ಮಾಡಬೇಕಿದೆ. ಈ ಅಪ್‍ಲೋಡ್ ಮಾಡಲಾದ ದಾಖಲೆಗಳನ್ನು ಅಧಿಕಾರಿಗಳ ಸಮಿತಿಯು ಪರಿಶೀಲಿಸಲಿದೆ. ಲಭ್ಯವಿರುವ ಸೀಟುಗಳ ಸಂಖ್ಯೆ, ಬೋಧನಾ ಶುಲ್ಕ ಮತ್ತು ಕೌನ್ಸೆಲಿಂಗ್ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.