ಕಾಮಿಡಿಯನ್ ವೀರ್ ದಾಸ್‌ರನ್ನು ತಡೆದ ಬೆಂಗಳೂರು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ; ಕಾರಣ ಇಲ್ಲಿದೆ
ವೀರ ದಾಸ್
ಬೆಂಗಳೂರು: ನಟ-ಕಾಮಿಡಿಯನ್ ವೀರ ದಾಸ್ ತನ್ನ ನೆಟ್ಫ್ಲಿಕ್ಸ್ ಸ್ಪೆಷಲ್ ‘ವೀರ್ ದಾಸ್:ಲ್ಯಾಂಡಿಂಗ್’ಗಾಗಿ ತನ್ನ ಮೊದಲ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಸಂಭ್ರಮದಲ್ಲಿದ್ದಾರೆ. ಪ್ರಸ್ತುತ ‘ಮೈಂಡ್ಫೂಲ್’ ಪ್ರವಾಸದಲ್ಲಿರುವ ದಾಸ್ ಅವರನ್ನು ಇತ್ತೀಚಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳು ತಡೆದು ನಿಲ್ಲಿಸಿದ್ದರು.
ಭದ್ರತಾ ಸಿಬ್ಬಂದಿ ಜೊತೆ ತನ್ನ ನಗೆಯುಕ್ಕಿಸುವ ಸಂಭಾಷಣೆಯನ್ನು ದಾಸ್ ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ತನ್ನ ಬ್ಯಾಗ್ ನಲ್ಲಿ ಪ್ರಶಸ್ತಿಯಿದೆ ಎಂಬ ಮಾಹಿತಿಯನ್ನು ದಾಸ್ ಹಂಚಿಕೊಂಡಾಗ ಭದ್ರತಾ ಅಧಿಕಾರಿಯೋರ್ವ ಅದು ಮೊನಚಾದ ಅಂಚುಗಳುಳ್ಳ ಪ್ರತಿಮೆಯೇ ಎಂದು ಪ್ರಶ್ನಿಸಿದ್ದರು. ಅಲ್ಲ, ಅದು ಪ್ರಶಸ್ತಿ ಎಂದು ದಾಸ್ ಸ್ಪಷ್ಟಪಡಿಸಿದ್ದರು.
ಇದು ಮೊನಚಾಗಿದೆಯಲ್ಲ ಎಂದು ಅಧಿಕಾರಿ ಹೇಳಿದಾಗ, ಇಲ್ಲ ಸರ್,ಅದು ಮೊನಚಾಗಿಲ್ಲ, ಅದು ಅದರ ರೆಕ್ಕೆ ಎಂದು ಉತ್ತರಿಸಿದ್ದರು.
ಬಳಿಕ ದಾಸ್ ಅದನ್ನು ತನ್ನ ಬ್ಯಾಗ್ ನಿಂದ ಹೊರತೆಗೆದು ತೋರಿಸಿದ್ದರು ಮತ್ತು ಅಧಿಕಾರಿ ಅವರಿಗೆ ಅಭಿನಂದನೆಗಳನ್ನೂ ತಿಳಿಸಿದ್ದರು.
ಅಧಿಕಾರಿ: ಚೆನ್ನಾಗಿದೆ, ಅಭಿನಂದನೆಗಳು. ಅಂದ ಹಾಗೆ ನೀವು ಏನು ಮಾಡಿಕೊಂಡಿದ್ದೀರಿ?
ದಾಸ್: ಕಾಮಿಡಿಯನ್ ಆಗಿದ್ದೇನೆ, ಸರ್. ಜೋಕ್ಗಳನ್ನು ಹೇಳುತ್ತೇನೆ.
ಅಧಿಕಾರಿ: ಜೋಕ್ ಹೇಳುವುದಕ್ಕೂ ಪ್ರಶಸ್ತಿ ದೊರಕುತ್ತದೆಯೇ?
ದಾಸ್: ನನಗೂ ಅದು ವಿಚಿತ್ರ ಅನ್ನಿಸಿತ್ತು,ಸರ್.
‘ಇಷ್ಟಾದ ಬಳಿಕ ನಾವಿಬ್ಬರೂ ಮನಸ್ಸು ಬಿಚ್ಚಿ ನಕ್ಕಿದ್ದೆವು. ಪ್ರಶಸ್ತಿಯನ್ನು ಬ್ಯಾಗಿಗೆ ವಾಪಸ್ ಹಾಕಿಕೊಂಡು ನಾನು ವಿಮಾನದತ್ತ ತೆರಳಿದ್ದೆ ’ಎಂದು ದಾಸ್ ಬರೆದುಕೊಂಡಿದ್ದಾರೆ.
ದಾಸ್ ಅವರ ಪೋಸ್ಟ್ ಶೀಘ್ರವೇ ವೈರಲ್ ಆಗಿದ್ದು,15 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ.
‘ನಮ್ಮನ್ನು ನಿಮ್ಮ ಸಂತೋಷದ ಭಾಗವಾಗಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಓರ್ವ ಬಳಕೆದಾರ ಪ್ರತಿಕ್ರಿಯಿಸಿದ್ದರೆ, ‘ಸಂತೋಷ ಮತ್ತು ನಗುವನ್ನು ಹರಡಲು ಪ್ರಶಸ್ತಿ ಪಡೆಯುವುದು ಅಚ್ಚರಿಯನ್ನುಂಟು ಮಾಡಿದ್ದು ಮೋಜಿನ ವಿಷಯವಾಗಿದೆಯಲ್ಲವೇ? ’ಎಂದು ಇನ್ನೋರ್ವ ಬಳಕೆದಾರ ಬರೆದಿದ್ದಾರೆ.
‘ನೀವು ಪ್ರತಿಯೊಬ್ಬರನ್ನೂ ನಕ್ಕು ನಲಿಸುತ್ತೀರಿ, ಸೆಕ್ಯೂರಿಟಿಯವರನ್ನೂ ನೀವು ಬಿಡಲಿಲ್ಲ, ಅಭಿನಂದನೆಗಳು, ವೀರ್’ ಎಂದು ಇನ್ನೋರ್ವ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.