ತೆರಿಗೆ ಪಾವತಿ ನೋಟೀಸ್‌ಗೆ ಭಯಪಡುವ ಅವಶ್ಯಕತೆ ಇಲ್ಲ: ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ
Image Credit :Freepik
ಬೆಂಗಳೂರು: ಯುಪಿಐನಲ್ಲಿ ವಾರ್ಷಿಕ 40 ಲಕ್ಷ ರೂ.ಗಳ ಮೇಲ್ಪಟ್ಟು ವ್ಯವಹಾರ ಮಾಡಿದ ವ್ಯಾಪಾರಿಗಳಿಗೆ ತೆರಿಗೆ ಪಾವತಿ ನೋಟೀಸ್ ನೀಡಲಾಗಿದ್ದು, ವಹಿವಾಟಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಹೀಗಾಗಿ ನೋಟಿಸ್‌ಗೆ ಭಯಪಡುವ ಅವಶ್ಯಕತೆ ಇಲ್ಲ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತೆ ಮೀರಾ ಸುರೇಶ್ ಪಂಡಿತ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಜಿಎಸ್‌ಟಿ ಅರಿವು’ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, 2020-21ನೆ ಸಾಲಿನಿಂದ 2024-25ನೆ ಸಾಲಿನ ಅಂತ್ಯದವರೆಗೆ ನಗರದ ಕೆಲ ವ್ಯಾಪಾರಿಗಳು ಯುಪಿಐನಲ್ಲಿ ವಾರ್ಷಿಕ 40 ಲಕ್ಷ ರೂ. ಮೇಲ್ಪಟ್ಟು ವ್ಯವಹಾರ ಮಾಡಿದ್ದಾರೆ. ಹೀಗಾಗಿ ಜಿಎಸ್‌ಟಿ ಕಾಯ್ದೆ ಅನ್ವಯ ನೋಟಿಸ್ ನೀಡಿದ್ದು, ಉತ್ತರಿಸಲು ಸಾಕಷ್ಟು ಕಾಲಾವಕಾಶ ನೀಡಲಾಗಿದೆ ಎಂದರು.
ಇಲಾಖೆಯಿಂದ ನೋಟೀಸ್ ಬಂದ ಕೂಡಲೇ ಕೆಲ ವರ್ತಕರು ಯುಪಿಐನಲ್ಲಿ ವ್ಯವಹರಿಸುವುದನ್ನು ನಿಲ್ಲಿಸಿ, ಗ್ರಾಹಕರಿಂದ ನಗದು ಹಣ ಸ್ವೀಕರಿಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಯುಪಿಐ ವಹಿವಾಟು ನಿಲ್ಲಿಸಿದರೆ ಸಣ್ಣ ವ್ಯಾಪಾರಿಗಳಿಗೆ ನಷ್ಟವಾಗಲಿದ್ದು, ದೊಡ್ಡ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ವರ್ತಕರು ಯಾವುದೇ ರೂಪದಲ್ಲಿ ವಹಿವಾಟು ನಡೆಸಿದ್ದರೂ, ಅಂತಹ ವರ್ತಕರಿಂದ ಜಿಎಸ್‌ಟಿ ಕಾಯ್ದೆ ಅನ್ವಯಿಸುವ ತೆರಿಗೆಯನ್ನು ಸಂಗ್ರಹಿಸಲು ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
ಹಿಂದಿನ ವರ್ಷ ವಾರ್ಷಿಕ ವಹಿವಾಟು 1.50 ಕೋಟಿ ರೂ.ಗಿಂತ ಕಡಿಮೆಯಿರುವ ವ್ಯಾಪಾರಿಗಳು ಜಿಎಸ್‌ಟಿ ಅಡಿ ನೋಂದಣಿ ಪಡೆದು ರಾಜಿ ತೆರಿಗೆ ಪದ್ದತಿ ಆಯ್ಕೆ ಮಾಡಿಕೊಳ್ಳಬಹುದು. ಈ ಪದ್ದತಿಯ ಅಡಿಯಲ್ಲಿ ಶೇ.0.5ರಷ್ಟು ಎಸ್‌ಜಿಎಸ್‌ಟಿ ಮತ್ತು ಶೇ.0.5ರಷ್ಟು ಸಿಜಿಎಸ್‌ಟಿ ಪಾವತಿಸಬೇಕು. ಆದರೆ, ನೋಂದಣಿ ಪಡೆಯದೆ ನಡೆಸಿರುವ ವಹಿವಾಟಿಗೆ ರಾಜಿ ತೆರಿಗೆ ಪದ್ದತಿ ಅನ್ವಯಿಸುವುದಿಲ್ಲ. ಈಗಾಗಲೇ ವರ್ತಕರ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದ್ದು, ದೂರವಾಣಿ 080-25714833/ 9845370404 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಮೀರಾ ಸುರೇಶ್ ಪಂಡಿತ್ ತಿಳಿಸಿದರು.
ಪ್ರಸ್ತುತ ಪೋನ್‌ಪೇ, ಪೇಟಿಎಂನಲ್ಲಿ ನಡೆಸಿರುವ ವಹಿವಾಟು ತೆಗೆದುಕೊಳ್ಳಲಾಗಿದೆ. ಗೂಗಲ್ ಪೇ, ಬ್ಯಾಂಕ್ ಖಾತೆಯ ವಹಿವಾಟಿನ ಮಾಹಿತಿ ಇನ್ನೂ ಸಿಕ್ಕಿಲ್ಲ. ಕೆಲವರು ವಾರ್ಷಿಕ 1 ಕೋಟಿ ರೂ, 2 ಕೋಟಿ ರೂ, ಮತ್ತು 6 ಕೋಟಿ ರೂ.ವರೆಗೂ ವಹಿವಾಟು ನಡೆಸಿದ್ದಾರೆ. ಜಿಎಸ್‌ಟಿ ಕಾಯ್ದೆಯಲ್ಲಿ ಇರುವಂತೆ ವಾರ್ಷಿಕ ವಹಿವಾಟು ಮಿತಿ ಮೀರಿರುವ ವರ್ತಕರಿಗೆ ನೋಟೀಸ್ ನೀಡುವ ಪ್ರಕ್ರಿಯೆ ಮುಂದುವರೆಲಿದೆ.
- ಮೀರಾ ಸುರೇಶ್ ಪಂಡಿತ್, ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತೆ