×
Ad

ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ | ಎನ್.ರವಿಕುಮಾರ್ ವಿರುದ್ಧ ಸಭಾಪತಿಗೆ ದೂರು: ಸಚಿವರಿಂದ ಪ್ರತಿಭಟನೆ ಎಚ್ಚರಿಕೆ

Update: 2025-07-03 18:14 IST

                                                                ಎನ್.ರವಿಕುಮಾರ್

ಬೆಂಗಳೂರು : ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್ತಿನ ವಿಪಕ್ಷ ಬಿಜೆಪಿಯ ಮುಖ್ಯ ಸಚೇತಕ ಎನ್.ರವಿಕುಮಾರ್ ಸದಸ್ಯತ್ವವನ್ನು ರದ್ದುಪಡಿಸುವಂತೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಕಾಂಗ್ರೆಸ್ ದೂರು ಸಲ್ಲಿಸಿದೆ. ಜತೆಗೆ, ರವಿಕುಮಾರ್ ಕ್ಷಮೆಯಾಚನೆ ಮಾಡದಿದ್ದಲ್ಲಿ, ಪ್ರತಿಭಟಿಸುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಸಭಾಪತಿಗೆ ದೂರು ನೀಡಿದ್ದು, ಇತ್ತೀಚಿಗೆ ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟಿಸುತ್ತಿರುವ ವೇಳೆ ಉಪ ಪೊಲೀಸ್ ಆಯುಕ್ತ (ವಿಧಾನಸೌಧ ಭದ್ರತೆ) ಎಂ ಎನ್. ಕರಿಬಸವನಗೌಡ ಅವರೊಂದಿಗೆ ಮಾತನಾಡುತ್ತಿರುವಾಗ ರವಿಕುಮಾರ್ ಅವರು, “ಮುಖ್ಯ ಕಾರ್ಯದರ್ಶಿ ಶಾಲಿನಿ ಅವರು ರಾತ್ರಿಯಿಡೀ ರಾಜ್ಯ ಸರಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ" ಎಂದು ವ್ಯಂಗ್ಯವಾಗಿ ಹೇಳಿರುವ ಬಗ್ಗೆ 'ಇಂಡಿಯಾ ಟುಡೇ' ವರದಿ ಮಾಡಿದೆ.

ಈ ಕುರಿತು ಸಭಾಪತಿಗಳು ಕ್ರಮ ಕೈಗೊಳ್ಳುವುದು ಮಾತ್ರವಲ್ಲದೆ, ವಿಪಕ್ಷ ಬಿಜೆಪಿಯ ಮುಖ್ಯ ಸಚೇತಕ ಎನ್.ರವಿಕುಮಾರ್ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಅದೇ ರೀತಿ, ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಲಾಗಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಪ್ರತಿಭಟನೆ ಎಚ್ಚರಿಕೆ: ರವಿ ಕುಮಾರ್ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ಹೊರಹಾಕಿದ್ದು, ಕರ್ನಾಟಕದ ಬಿಜೆಪಿ ನಾಯಕರಿಂದ ಮಹಿಳೆಯರ ನಿಂದನೆ ನಿರಂತರವಾಗಿ ನಡೆಯುತ್ತಿದೆ. ಓರ್ವ ಹಿರಿಯ ಮಹಿಳಾ ಐಎಎಸ್ ಅಧಿಕಾರಿ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ರೀತಿ ಬಿಜೆಪಿ ಎಂಎಲ್‍ಸಿ ಅವರ ಮನಃಸ್ಥಿತಿ ಎಂಥದ್ದು ಎಂದು ತೋರಿಸುತ್ತದೆ. ರವಿಕುಮಾರ್ ಅವರು ಸಮಸ್ತ ಮಹಿಳಾ ಕುಲಕ್ಕೆ ಮಾಡಿರುವ ಅವಮಾನ ಇದಾಗಿದೆ ಎಂದು ಟೀಕಿಸಿದ್ದಾರೆ.

ಕಳೆದ ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಸಿ.ಟಿ.ರವಿ ಅವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಆ ಪಕ್ಷದ ನಾಯಕರು ಒಂದೂ ಮಾತನಾಡಲಿಲ್ಲ. ಇಂತಹ ನಾಯಕರ ಹೇಳಿಕೆಗಳಿಗೆ ಕೇಂದ್ರದ ನಾಯಕರು ಪರೋಕ್ಷ ಬೆಂಬಲ ನೀಡಿದಂತಿದೆ. ಇದು ಮಹಿಳೆಯರಿಗೆ ಬಿಜೆಪಿ ನಾಯಕರು ಕೊಡುವ ಗೌರವ ಎಂಥದ್ದು ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕವಾಗಿ ಮಹಿಳಾ ಅಧಿಕಾರಿ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ರವಿ ಕುಮಾರ್ ಅವರು ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲವಾದರೆ ರವಿ ಕುಮಾರ್ ಅವರು ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

ಅಸಹ್ಯದ ಪರಮಾವಧಿ:ದಿನೇಶ್ ಗುಂಡೂರಾವ್

ಶಾಲಿನಿ ರಜನೀಶ್ ಬಗ್ಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಬಳಸಿರುವ ಭಾಷೆ ಅಸಹ್ಯದ ಪರಮಾವಧಿ. ಚಾರಿರತ್ರ್ಯಹೀನ ಬಿಜೆಪಿಯವರಿಗೆ ಹೆಣ್ಣಿನ ಬಗ್ಗೆ ಗೌರವವೇ ಇಲ್ಲ ಎಂಬುದು ರವಿಕುಮಾರ್ ಹೇಳಿಕೆಯಿಂದ ಸಾಬೀತಾಗಿದೆ. ಬಿಜೆಪಿಯವರ ಸಂಸ್ಕೃತಿಯೆ ಇದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ರವಿಕುಮಾರ್ ಈ ರೀತಿ ಮಹಿಳೆಯರ ಬಗ್ಗೆ ಅಗೌರವದಿಂದ ನಡೆದುಕೊಳ್ಳುವುದು ಇದೆ ಮೊದಲೇನಲ್ಲ ಶಾಲಿನಿ ರಜನೀಶ್ ರಾಜ್ಯದ ದಕ್ಷ ಅಧಿಕಾರಿ. ಉನ್ನತ ಹುದ್ದೆಯಲ್ಲಿರುವ ಶಾಲಿನಿ ರಜನೀಶ್ ಬಗ್ಗೆ ರವಿಕುಮಾರ್ ಆಡಿರುವ ಮಾತು ಖಂಡನೀಯ. ರವಿಕುಮಾರ್ ಈ ಕೂಡಲೇ ಶಾಲಿನಿ ರಜನೀಶ್ ಕ್ಷಮೆ ಕೇಳಬೇಕು. ಬಿಜೆಪಿ ವರಿಷ್ಠರಿಗೆ ಸ್ತ್ರೀಯರ ಬಗ್ಗೆ ಗೌರವವಿದ್ದರೆ ರವಿಕುಮಾರ್ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಪೊಲೀಸರಿಂದ ವರದಿ ಕೇಳಿದ ಆಯೋಗ..!

ಶಾಲಿನಿ ರಜನೀಶ್ ಬಗ್ಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿಕೆಯನ್ನು ರಾಜ್ಯ ಮಹಿಳಾ ಆಯೋಗ ಖಂಡಿಸಿದ್ದು, ಆರು ದಿನದೊಳಗೆ ವರದಿ ಸಲ್ಲಿಸುವುದು ಮಾತ್ರವಲ್ಲದೆ, ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News