×
Ad

ಜಾತಿ ಆಧಾರಿತ ಬಹಿಷ್ಕಾರ ಸಮರ್ಥಿಸಿದ ಪೇಜಾವರ ಶ‍್ರೀ, ಟಿವಿ ನಿರೂಪಕ ಅಜಿತ್‌ ಹನುಮಕ್ಕನವರ್ ವಿರುದ್ಧ ದೂರು ದಾಖಲು

Update: 2024-01-15 21:15 IST

ಪೇಜಾವರ ಶ‍್ರೀ    ̧   ಅಜಿತ್ ಹನುಮಕ್ಕನವರ್

ಬೆಂಗಳೂರು: ಜಾತಿ ಆಧಾರಿತ ಬಹಿಷ್ಕಾರವನ್ನು ಸಮರ್ಥಿಸಿ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಸುವರ್ಣ ನ್ಯೂಸ್ ಟಿವಿಯ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಜನವರಿ 12ರಂದು ದಲಿತ ಸಂಘಟನೆಯೊಂದು ದೂರು ದಾಖಲಿಸಿದೆ.

ಈ ದೂರು ಡಿಸೆಂಬರ್ 27, 2023ರಂದು ಪ್ರಸಾರವಾಗಿದ್ದ ಉಡುಪಿ ಪೇಜಾವರ ಸ್ವಾಮೀಜಿಗಳೊಂದಿಗಿನ “ಅಯೋಧ್ಯೆಯಲ್ಲಿ ಪೂಜೆ ಸಲ್ಲಿಸಲು ದಲಿತರಿಗೆ ಅವಕಾಶ ನೀಡಲಾಗುತ್ತದೆಯೆ?” ಎಂದು ಶೀರ್ಷಿಕೆ ಹೊಂದಿದ್ದ ‘ನ್ಯೂಸ್ ಅವರ್’ ಟಿವಿ ಕಾರ್ಯಕ್ರಮವನ್ನು ಕೇಂದ್ರೀಕರಿಸಿದೆ. ಈ ಕಾರ್ಯಕ್ರಮದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ದಲಿತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆಯೆ ಎಂಬ ಕುರಿತು ಚರ್ಚೆ ಏರ್ಪಡಿಸಲಾಗಿತ್ತು.

ಜನವರಿ 22ರಂದು ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ಸಮಯದಲ್ಲೇ ಈ ದೂರು ದಾಖಲಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಟ್ರಸ್ಟಿಗಳ ಪೈಕಿ ಪೇಜಾವರ ಶ್ರೀ ಕೂಡಾ ಓರ್ವರಾಗಿದ್ದಾರೆ.

ಚರ್ಚೆಯ ಸಂದರ್ಭದಲ್ಲಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ನಿರೂಪಕ ಅಜಿತ್ ಹನುಮಕ್ಕನವರ್ ದಲಿತರ ವಿರುದ್ಧ ತಾರತಮ್ಯ ಹಾಗೂ ಅವಹೇಳನಾಕಾರಿ ಮಾತುಗಳನ್ನು ಬಳಸಿದ್ದಾರೆ ಎಂದು ಡಾ. ಬಿ.ಆರ್.ಅಂಬೇಡ್ಕರ್ ದಂಡು ಎಂಬ ಸಂಘಟನೆಯು ದಾಖಲಿಸಿರುವ ದೂರಿನಲ್ಲಿ ಆರೋಪಿಸಲಾಗಿದೆ. “ಧಾರ್ಮಿಕ ಸ್ಥಳಗಳಲ್ಲಿ ಧಾರ್ಮಿಕ ನಿಯಮಗಳನ್ನು ಪಾಲಿಸಬೇಕು ಹಾಗೂ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲು ದಲಿತರಿಗೆ ಅವಕಾಶವಿಲ್ಲ ಎಂದು ಹೇಳುವ ಮೂಲಕ ಪೇಜಾವರ ಶ‍್ರೀ ಹಾಗೂ ಟಿವಿ ನಿರೂಪಕ ಇಬ್ಬರೂ ಅಸ್ಪೃಶ‍್ಯತೆಯನ್ನು ಸಮರ್ಥಿಸಿದ್ದಾರೆ” ಎಂದು ದೂರಿನಲ್ಲಿ ಹೇಳಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಡಾ. ಬಿ.ಆರ್.ಅಂಬೇಡ್ಕರ್ ದಂಡು ಸಂಘಟನೆಯ ಕಾನೂನು ಸಲಹೆಗಾರ ಆದರ್ಶ್ ಆರ್. ಅಯ್ಯರ್, ಬೆಂಗಳೂರಿನ ಹೈಗ್ರೌಂಡ್ ಠಾಣೆಯ ಪೊಲೀಸರು ದೂರಿಗೆ ಪ್ರತಿಯಾಗಿ ಕೇವಲ ಸ್ವೀಕೃತಿ ಪತ್ರವನ್ನು ನೀಡಿದ್ದು, ಇದುವರೆಗೆ ಯಾವುದೇ ಪ್ರಾಥಮಿಕ ಮಾಹಿತಿ ವರದಿ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News