ಸಾಮಾಜಿಕ ಜಾಲತಾಣ ಮೂಲಕ ಗಲಭೆಗೆ ಪ್ರಚೋದನೆ ಆರೋಪ: ‘ಕಿರಿಕ್ ಕೀರ್ತಿ’ ವಿರುದ್ಧ ಕ್ರಮ ಜರುಗಿಸಲು ಕೋರಿ ದೂರು
ಕಿರಿಕ್ ಕೀರ್ತಿ (Photo credit: instagram/kirikkeerthi)
ಬೆಂಗಳೂರು: ಪತ್ರಕರ್ತ ಹಾಗೂ ನಟ ಕಿರಿಕ್ ಕೀರ್ತಿ ಎಂಬವರು ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿಕೊಂಡು ಧರ್ಮಸ್ಥಳದ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಾ, ಸಾಮರಸ್ಯ ಕದಡಿ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಬಿ.ಎಸ್. ಸಿದ್ದರಾಜು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಎಸ್‍ಐಟಿ ರಚನೆ ಮಾಡಿದ್ದು, ಪೊಲೀಸ್ ತನಿಖೆಯು ಪ್ರಗತಿಯಲ್ಲಿರುತ್ತದೆ. ಆದರೆ ಈ ಸಮಯದಲ್ಲಿ ಕಿರಿಕ್ ಕೀರ್ತಿ ತಮ್ಮ ‘ಕಿರಿಕ್ ಕೀರ್ತಿ’ ಯೂಟ್ಯೂಬ್ ಚಾನಲ್‍ನಲ್ಲಿ ಜು.24ರಂದು ‘ಧರ್ಮಸ್ಥಳ ಕೇಸಿನ ಕರಾಳ ಮುಖಗಳ ಅನಾವರಣ’ ಶೀರ್ಷಿಕೆ ನೀಡಿ ‘ಧರ್ಮಗಳ ನಡುವೆ ದ್ವೇಷ ಭಾವನೆ ಮೂಡಿಸುವ’ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ ಎಂದು ಬಿ.ಎಸ್. ಸಿದ್ದರಾಜು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸುಮಾರು 9 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ವಿಡಿಯೋದಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುವ ಮುಖಾಂತರ ಸಮಾಜದಲ್ಲಿ ಧರ್ಮಗಳ ನಡುವೆ ದ್ವೇಷ ಭಾವನೆ ಮೂಡಿಸಿ ಸಮಾಜದಲ್ಲಿ ಶಾಂತಿ ಕದಡುವ ಹಾಗೂ ಪ್ರಚೋದನೆ ನೀಡುವ ಕಾರ್ಯವನ್ನು ಕೀರ್ತಿ ತಮ್ಮ ಯುಟ್ಯೂಬ್ ಚಾನೆಲ್ ಮೂಲಕ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರಕಾರ ಧರ್ಮಸ್ಥಳ ಸರಣಿ ಹತ್ಯೆ ಕುರಿತು ಎಸ್‍ಐಟಿ ರಚನೆ ಮಾಡಿ ಸತ್ಯವನ್ನು ಹೊರತರುವ ಕೆಲಸವನ್ನು ಮಾಡುತ್ತಿದ್ದರೆ, ಕಿರಿಕ್ ಕೀರ್ತಿ ಎಂಬವರು ತನಿಖೆಯ ಬಗ್ಗೆ ಹಾಗೂ ಕಾನೂನಿನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ನಿಷ್ಠಾವಂತ ಪೊಲೀಸ್ ಅಧಿಕಾರಿಗಳ ಆತ್ಮಸ್ಥೆರ್ಯವನ್ನು ಕುಗ್ಗಿಸುವಂತಹ ಕೆಲಸವನ್ನು ಮಾಡುತ್ತಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನನಿತ್ಯ ವಿಡಿಯೋಗಳನ್ನು ಮಾಡುತ್ತಾ ಆಧಾರರಹಿತ ಹೇಳಿಕೆಗಳನ್ನು ನೀಡುವ ಮುಖಾಂತರ ಸಮಾಜದಲ್ಲಿ ಶಾಂತಿ ಕದಡಿ ಗಲಭೆಗೆ ಪ್ರಚೋದನೆ ನೀಡುವ ಕೆಲಸಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ ಕಿರಿಕ್ ಕೀರ್ತಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಬಿ.ಎಸ್. ಸಿದ್ದರಾಜು ಆಗ್ರಹಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ:
‘ಮುಸ್ಲಿಂ ಧರ್ಮದ ಯುವಕ ತಮ್ಮ ಧರ್ಮ ಗುರುಗಳ ಜೊತೆ ಸೇರಿ ಲವ್ ಜಿಹಾದ್ ಮತ್ತು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವಂತೆ ಷಡ್ಯಂತ್ರ ರೂಪಿಸಿದ್ದಾರೆ. ಅವರ ಉದ್ದೇಶ ಕೇಸುಗಳು ಬಿದ್ದರೂ ಪರವಾಗಿಲ್ಲ, ಧರ್ಮಸ್ಥಳವನ್ನು ಮುಳುಗಿಸಬೇಕು ಅಷ್ಟೇ.. ಧರ್ಮಸ್ಥಳವನ್ನು ನಾಶ ಮಾಡಬೇಕು ಅಷ್ಟೇ.. ಉದ್ದೇಶ ಸ್ಪಷ್ಟ ಇದೆ.. ನನಗೆ ಅರ್ಥ ಆಗುತ್ತಿದೆ.. ನಿಮಗೆ ಅರ್ಥ ಆಗುತ್ತಿಲ್ಲ. ಸುಳ್ಳು ಹೇಳಿದರೆ ರಕ್ತ ಕುದಿಯುವಂತಾದರೆ, ಸತ್ಯ ತಿಳಿದ ನಮಗೆ ರಕ್ತ ಹೇಗೆ ಕುದಿಯಬೇಕೆಂದು ಆಲೋಚಿಸಿ, ನಾಚಿಕೆ ಆಗಬೇಕು.. ಕುದಿಯುತ್ತಿಲ್ಲವೆ ನಿಮಗೆ..’ ಎಂದು ಕಿರಿಕ್ ಕೀರ್ತಿ ವಿಡಿಯೋದಲ್ಲಿ ಪ್ರಚೋಧನೆ ಮತ್ತು ದ್ವೇಷ ಭಾವನೆ ಮೂಡಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರುದಾರ ಬಿ.ಎಸ್. ಸಿದ್ದರಾಜು ಆಕ್ಷೇಪವ್ಯಕ್ತಪಡಿಸಿದ್ದಾರೆ.