×
Ad

ಹೈಕಮಾಂಡ್ ಅಂಗಳಕ್ಕೆ ‘ಕಾಂಗ್ರೆಸ್ ನಾಯಕತ್ವದ ಬಿಕ್ಕಟ್ಟು’

Update: 2025-11-25 22:29 IST

ಬೆಂಗಳೂರು : ‘ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನರ್ ರಚನೆ’ ವಿಚಾರ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಸಿಎಂ, ಡಿಸಿಎಂ ಜತೆ ಪ್ರತ್ಯೇಕವಾಗಿ ಚರ್ಚಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದಿಲ್ಲಿಗೆ ತೆರಳಿದ್ದು, ಕರ್ನಾಟಕ ರಾಜ್ಯದ ಕಾಂಗ್ರೆಸ್ ಬಿಕ್ಕಟ್ಟು ಹೈಕಮಾಂಡ್ ಅಂಗಳಕ್ಕೆ ತಲುಪಿದೆ.

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ರಾಹುಲ್ ವಿದೇಶ ಪ್ರವಾಸದಿಂದ ಹಿಂದಿರುಗಿದ್ದು, ರಾಜ್ಯದ ಕಾಂಗ್ರೆಸ್ ನಾಯಕರ ಜೊತೆ ನಾಳೆ(ನ.26) ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ. ರಾಜ್ಯದ ನಾಯಕತ್ವ ಬಿಕ್ಕಟ್ಟು ಶಮನಕ್ಕೆ ಯಾವ ಸೂತ್ರವನ್ನು ಹೆಣೆಯಲಿದ್ದಾರೆ ಎಂಬುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಡಿ.ಕೆ.ಶಿವಕುಮಾರ್ ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ಹೀಗಾಗಿ ಹೈಕಮಾಂಡ್ ನಾಯಕರು ಒತ್ತಡಕ್ಕೆ ಸಿಲುಕಿದ್ದಾರೆ. ಡಿಸೆಂಬರ್ 8 ರಿಂದ ಬೆಳಗಾವಿ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ಅದಕ್ಕೂ ಮೊದಲೇ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನರ್ ರಚನೆಗೆ ಮುಂದಾದರೆ ತಪ್ಪು ಸಂದೇಶ ಕೊಟ್ಟಂತೆ ಆಗುತ್ತದೆ. ಹೀಗಾಗಿ ಈ ವಿಚಾರ ಮತ್ತಷ್ಟು ವಿಳಂಬ ಆಗುವ ಸಾಧ್ಯತೆಗಳಿವೆ.

ಈ ಬೆಳವಣಿಗೆಗಳ ನಡುವೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ತಮ್ಮ ಆಪ್ತ ಶಾಸಕರೊಂದಿಗೆ ಜತೆ ಸಮಾಲೋಚನೆ ನಡೆಸಿದ್ದಾರೆ.

ನಿಜಕ್ಕೂ ನಾಯಕತ್ವ ಬದಲಾವಣೆ ಆಗಲಿದೆಯೋ ಅಥವಾ ಸಂಪುಟ ಪುನರ್ ಮಾಡಿ, ಶಾಸಕರ ಒತ್ತಾಯದಂತೆ ಇನ್ನೂ ಒಂದೆರಡು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಿ ಬಿಕ್ಕಟ್ಟು ಶಮನ ಮಾಡಲಿದ್ದಾರೆಯೋ ಎಂಬುದನ್ನು ಕಾದುನೋಡಬೇಕಿದೆ. ಎಐಸಿಸಿ ಮುಖಂಡ ರಾಹುಲ್ ಗಾಂಧಿ ಕೈಗೊಳ್ಳಲಿರುವ ತೀರ್ಮಾನದ ಮೇಲೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿನ ಮುಂದಿನ ಬೆಳವಣಿಗೆಗಳು ನಿರ್ಧಾರವಾಗಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News