×
Ad

ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ : ಕಾಂಗ್ರೆಸ್ ಶಾಸಕ ರಾಜು ಕಾಗೆ

Update: 2025-06-23 13:17 IST

ಬೆಳಗಾವಿ: ವಸತಿ ನಿಗಮದಲ್ಲಿ ದುಡ್ಡು ಕೊಟ್ಟವರಿಗಷ್ಟೇ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಆರೋಪಿಸಿರುವ ಆಡಿಯೋ ವೈರಲ್ ಬೆನ್ನಲ್ಲೇ ಇದೀಗ ಮತ್ತೋರ್ವ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಸರಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನವನ್ನು ಹೊರಹಾಕಿದ್ದಾರೆ.

ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ರಾಜು ಕಾಗೆ, ವಸತಿ ನಿಗಮದಲ್ಲಿ ಮನೆ ಮಂಜೂರು ವಿಚಾರದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಬಿ.ಆರ್.ಪಾಟೀಲ್ ಅವರ ಆರೋಪವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ʼಅವರು ಹೇಳಿದ್ದು ಸುಳ್ಳಲ್ಲ, ನಿಜಾನೆ ಇದೆ. ಅವರು ಹೇಳಿದ ರೀತಿಯಲ್ಲೇ ನನ್ನ ಪರಿಸ್ಥಿತಿ ಇದೆ. ಬಿಆರ್ ಪಾಟೀಲ್ ಹೇಳಿದಂತೆ ನಮ್ಮಲ್ಲೂ ಅದೇ ರೀತಿ ಆಗುತ್ತಿದೆ. ಕ್ಷೇತ್ರದಲ್ಲಿ ಯಾವುದೇ ಕೆಲಸ ಆಗುತ್ತಿಲ್ಲʼ ಎಂದು ಹೇಳಿದ್ದಾರೆ.

ನಮ್ಮ ಸರಕಾರದಲ್ಲಿ ಯಾವುದೇ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಮುಖ್ಯಮಂತ್ರಿಗಳು 25 ಕೋಟಿ ರೂ.ವಿಶೇಷ ಅನುದಾನ ಕೊಟ್ಟಿದ್ದರು. ಅದರಲ್ಲಿ 12 ಕೋಟಿ ರೂ ರಸ್ತೆ ಕಾಮಗಾರಿಗೆ ಮತ್ತು 13 ಕೋಟಿ ರೂ. ಸಮುದಾಯ ಭವನಕ್ಕೆ ನೀಡಲಾಗಿದೆ. ಆದರೆ ಎರಡು ವರ್ಷವಾದರೂ ಇದುವರೆಗೂ ವರ್ಕ್ ಆರ್ಡರ್ ಕೊಟ್ಟಿಲ್ಲ. ಕೆಲಸ ಪ್ರಾರಂಭವಾಗಿಲ್ಲ. ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಇದರಿಂದ ನನ್ನ ಮನಸ್ಸಿಗೆ ಸಾಕಷ್ಟು ನೋವಾಗಿದೆ. ನಾನು ಕೂಡ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ. ಎರಡು ದಿನದಲ್ಲಿ ಮುಖ್ಯಮಂತ್ರಿಗೆ ರಾಜೀನಾಮೆ ಕೊಟ್ಟರೂ ಅದರಲ್ಲಿ ಆಶ್ಚರ್ಯವಿಲ್ಲ ಎಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.

‘ಕಾಂಗ್ರೆಸ್ಸಿನ ಶಾಸಕ ರಾಜು ಕಾಗೆ ಮಾತ್ರವಲ್ಲ, ಹತ್ತಾರು ಜನರಿದ್ದಾರೆ. ಒಬ್ಬೊಬ್ಬರೇ ಬಾಯಿ ಬಿಡಲಿದ್ದಾರೆ. ನೀವೇ ಕಾದುನೋಡಿ. ಶಾಸಕ ಬಿ.ಆರ್.ಪಾಟೀಲ್ ‘ಮನೆ ಹಂಚಿಕೆಗೆ ಲಂಚ ಕೊಡದೆ, ಏನೂ ಕೆಲಸ ಆಗುವುದಿಲ್ಲ’ ಎಂಬ ಆರೋಪ ಮಾಡಿದ್ದಾರೆ. ಸಿಎಂ ಕರೆದರೆ ಅವರ ಮುಂದೆಯೂ ವಾಸ್ತವಿಕ ಸ್ಥಿತಿಯನ್ನು ತಿಳಿಸುವುದಾಗಿ ಪಾಟೀಲ್ ಹೇಳಿದ್ದಾರೆ. ಆದರೆ, ಸಿಎಂ ಬಿ.ಆರ್.ಪಾಟೀಲರನ್ನು ಕರೆದು ಬಾಯಿಮುಚ್ಚಿಸುವ ಕೆಲಸ ಮಾಡಬಹುದೆಂಬ ಆತಂಕ ನಮಗಿದೆ’

- ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ

‘ಕಾಂಗ್ರೆಸ್ ಸರಕಾರ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿ ಆಡಳಿತ ಪಕ್ಷದ ಶಾಸಕರೊಬ್ಬರು ರಾಜೀನಾಮೆ ನೀಡಲು ಮುಂದಾಗಿರುವುದು ಸರಕಾರದ ದುರಾಡಳಿತಕ್ಕೆ ಸಾಕ್ಷಿ. ಸ್ವಪಕ್ಷೀಯ ಶಾಸಕರ ಆಕ್ರೋಶಗಳನ್ನು ಮುಚ್ಚಿ ಹಾಕುವುದೇ ಸಿದ್ದರಾಮಯ್ಯ ಸರಕಾರಕ್ಕೆ ಇದೀಗ ದೊಡ್ಡ ಸವಾಲಾಗಿದೆ. ರಾಯರೆಡ್ಡಿ, ಬಿ.ಆರ್.ಪಾಟೀಲ್ ಬಳಿಕ ಶಾಸಕ ರಾಜು ಕಾಗೆ ತಮ್ಮದೇ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾರರಿಂದ ಚುನಾಯಿಸಲ್ಪಟ್ಟ ಶಾಸಕರ ಮನವಿಗಳು ಈ ಸರಕಾರದಲ್ಲಿ ಅರಣ್ಯರೋದನ ಆಗಿವೆ. ಸ್ವಪಕ್ಷೀಯ ಶಾಸಕರಿಗೂ ನ್ಯಾಯ ಒದಗಿಸಲು ಈ ಸರಕಾರದಿಂದ ಸಾಧ್ಯವಾಗುತ್ತಿಲ್ಲ.

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

‘ನೀವು ಲಂಚ ಕೊಟ್ಟಿಲ್ಲ, ಹೀಗಾಗಿ ನಿಮಗೆ ಹಣ ಬಿಡುಗಡೆ ಆಗಿಲ್ಲ. ಸಿಎಂ ವಿಶೇಷ ಅನುದಾನವೇ ಬೋಗಸ್ ಆಗಿರುವಾಗ, ಬೇರೆ ಯೋಜನೆಗಳ ಅನುದಾನ ಹೇಗೆ ಬರುತ್ತದೆ. ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಶಾಸಕ ರಾಜು ಕಾಗೆ ಸತ್ಯವನ್ನು ಹೇಳಿದ್ದಾರೆ’

-ಅಭಯ್ ಪಾಟೀಲ್, ಬಿಜೆಪಿ ಶಾಸಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News