×
Ad

ಕಾಂಗ್ರೆಸ್ ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ, ಏಳನೇ ಗ್ಯಾರಂಟಿ ನೀರಿನ ಗ್ಯಾರಂಟಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಮುಂದಿನ ಚುನಾವಣೆಯಲ್ಲಿ ನಮಗೆ 141 ಸೀಟು ಬರಲಿವೆ"

Update: 2026-02-14 18:06 IST

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Photo: X/@DKShivakumar)

ಹಾವೇರಿ: ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿಗಳ ಜತೆಗೆ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡುತ್ತಿದೆ. ಕೇಂದ್ರ ಸರ್ಕಾರ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ, ಎತ್ತಿನಹೊಳೆಗೆ ಅನುಮತಿ ಕೊಟ್ಟರೆ ಏಳನೇ ಗ್ಯಾರಂಟಿಯಾಗಿ ನೀರಿನ ಗ್ಯಾರಂಟಿ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು.

ಹಾವೇರಿಯಲ್ಲಿ ಶನಿವಾರ ನಡೆದ ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ, ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ನಾನು ಚುನಾವಣೆಗೆ ಬಂದಾಗ ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ. ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿರುವ ಕಾರಣಕ್ಕೆ ಪಂಚ ಗ್ಯಾರಂಟಿ ನೀಡಿ, ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ ನೀಡುತ್ತಿದ್ದೇವೆ. ಭೂ ದಾಖಲೆ ಇಲ್ಲದ 1,11,111 ಜನರಿಗೆ ಪೋಡಿ ಮಾಡಿ, ಖಾತಾ ಮಾಡಿ ದಾಖಲೆ ನೀಡಲಾಗಿದೆ. ಆಮೂಲಕ ನಿಮ್ಮ ಮುಂದಿನ ಪೀಳಿಗೆಗೆ ಆಸ್ತಿ ದಾಖಲೆ ಕೊಟ್ಟ ಏಕೈಕ ಸರ್ಕಾರ ಈ ಕಾಂಗ್ರೆಸ್ ಸರ್ಕಾರ” ಎಂದು ತಿಳಿಸಿದರು.

“ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ 35-40 ಲಕ್ಷ ಪರಿಹಾರ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಕಾವೇರಿ ನದಿಗೆ ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ನಮ್ಮ ಮಾರ್ಗದರ್ಶನದಲ್ಲಿ ಕಾನೂನು ತಜ್ಞರ ತಂಡ ವಾದ ಮಂಡಿಸಿ ಸುಪ್ರೀಂ ಕೋರ್ಟ್ ನಲ್ಲಿ ಈ ಯೋಜನೆ ಪರವಾಗಿ ತೀರ್ಪು ಬಂದಿದೆ. ಆಮೂಲಕ ತಮಿಳುನಾಡು ಹಾಕಿದ್ದ ಆಕ್ಷೇಪಣಾ ಅರ್ಜಿ ವಜಾಗೊಳಿಸಲಾಗಿದೆ. ಈಗ ಈ ಯೋಜನೆಗೆ ಡಿಪಿಆರ್ ಸಿದ್ಧಪಡಿಸುತ್ತಿದ್ದೇವೆ. ಮಹದಾಯಿ ವಿಚಾರದಲ್ಲಿ ಕೇಂದ್ರ ಅರಣ್ಯ ಇಲಾಖೆ ಅನುಮತಿ ನೀಡಿಲ್ಲ. ಇನ್ನು ಕುಡಿಯುವ ನೀರು ಪೂರೈಕೆ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ 3 ತಿಂಗಳಲ್ಲಿ ಅನುಮತಿ ಕೊಟ್ಟರೆ ಸಾಕು. ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ಹರಿಸುವ ಕೆಲಸವನ್ನು ಈ ಸರ್ಕಾರ ಹಾಗೂ ಡಿ.ಕೆ. ಶಿವಕುಮಾರ್ ಮಾಡಲಿದ್ದಾರೆ.

ಕೃಷ್ಣಾ, ಕಾವೇರಿ, ಮಹದಾಯಿ ಯೋಜನೆಗಳ ಮೂಲಕ ರೈತರ ಬದುಕು ಹಸನ ಮಾಡಲು ನಮ್ಮ ಸರ್ಕಾರ 7ನೇ ಗ್ಯಾರಂಟಿಯಾಗಿ ನೀರಿನ ಗ್ಯಾರಂಟಿ ನೀಡಲಿದೆ. ಪ್ರತಿಯೊಬ್ಬರಿಗೆ ಕುಡಿಯಲು ನೀರು, ವ್ಯವಸಾಯಕ್ಕೆ ನೀರು, ಕೆರೆ ತುಂಬಿಸಿ ಅಂತರ್ಜಲ ಹೆಚ್ಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿದರು.

ʼಮುಂದಿನ ಚುನಾವಣೆಯಲ್ಲಿ ನಮಗೆ 141 ಸೀಟು ಬರಲಿವೆʼ:

“ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಒದಗಿಸಲು ಇಂಧನ ಇಲಾಖೆಯಿಂದ ವರ್ಷಕ್ಕೆ 20 ಸಾವಿರ ಕೋಟಿ ಹಣ ವೆಚ್ಚ ಮಾಡಲಾಗುತ್ತಿದೆ. ಇಂತಹ ಐಸಿಹಾಸಿಕ ಕಾರ್ಯಕ್ರಮಗಳನ್ನು ನಾವು ನೀಡುತ್ತಿದ್ದೇವೆ. ಈ ಬಾರಿ ಚುನಾವಣೆಯಲ್ಲಿ ನಮಗೆ 136 ಸೀಟುಗಳು ಬಂದಿದ್ದವು, ಮುಂದಿನ ಚುನಾವಣೆಯಲ್ಲಿ ನಮಗೆ 141 ಸೀಟುಗಳು ಬರಲಿವೆ. ನನ್ನ ಈ ಮಾತನ್ನು ಬರೆದಿಟ್ಟುಕೊಳ್ಳಿ. ನನಗೆ ನಮ್ಮ ಶಾಸಕರಿಗೆ ಆತ್ಮವಿಶ್ವಾಸವಿದೆ. 3 ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಎರಡು ಕಡೆ ಮಾಜಿ ಮುಖ್ಯಮಂತ್ರಿಗಳ ಪುತ್ರರು ಸ್ಪರ್ಧೆ ಮಾಡಿದ್ದರು. ಆ ಕ್ಷೇತ್ರಗಳು ನಮ್ಮ ಬಳಿ ಇರಲಿಲ್ಲ. ಆ ಕ್ಷೇತ್ರಗಳನ್ನು ಕಾಂಗ್ರೆಸ್ ಗೆ ನೀಡಿ ನಮ್ಮ ಸಂಖ್ಯಾಬಲವನ್ನು 139ಕ್ಕೆ ಏರಿಕೆ ಮಾಡಿದ್ದೀರಿ. ನಿಮಗೆಲ್ಲರಿಗೂ ಧನ್ಯವಾದ. ನಿಮ್ಮ ಈ ಋಣ ತೀರಿಸಲು ಈ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿದ್ದೇವೆ” ಎಂದು ತಿಳಿಸಿದರು.

“ಜನರು ನೆಮ್ಮದಿಯಿಂದ ಬದುಕುತ್ತಿರುವ ದಿನಗಳು, ಮಹಿಳೆಯರು ಸಂತೋಷದಿಂದ ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವ ದಿನಗಳು, ಗೃಹಿಣಿಯರ ಬದುಕಿನಲ್ಲಿ ಬದಲಾವಣೆ ಕಂಡ ದಿನಗಳು, ಯುವಕರು ಉದ್ಯೋಗ ಸೃಷ್ಟಿಮಾಡಿಕೊಳ್ಳುತ್ತಿರುವ ದಿನಗಳನ್ನು ನಾವು ನೀವು ನೋಡುತ್ತಿದ್ದೇವೆ. ಯಡಿಯೂರಪ್ಪನವರೇ, ಮಿಸ್ಟರ್ ಕುಮಾರಸ್ವಾಮಿ, ಮಿಸ್ಟರ್ ಅಶೋಕ್, ಮಿಸ್ಟರ್ ವಿಜಯೇಂದ್ರ ನಿಮ್ಮ ಆಡಳಿತ ಅವಧಿಯಲ್ಲಿ ಇಂತಹ ಒಂದು ಕೆಲಸವನ್ನು ನೀವು ಮಾಡಿದ್ದರೆ, ಜನರಿಗಾಗಿ ಒಂದೇ ಒಂದು ಕಾರ್ಯಕ್ರಮವನ್ನು ಬಿಜೆಪಿ ಹಾಗೂ ಜನತಾ ದಳದವರು ಕೊಟ್ಟಿದ್ದರೆ, ರಾಜಕೀಯದಲ್ಲಿ ನಿಮಗೆ ಮಾತನಾಡುವ ಶಕ್ತಿ ಇರುತ್ತಿತ್ತು. ಆದರೆ ನೀವು ಅದನ್ನು ಕಳೆದುಕೊಂಡಿದ್ದೀರಿ” ಎಂದು ವಾಗ್ದಾಳಿ ನಡೆಸಿದರು.

“ಬಿಜೆಪಿಯವರು ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ. ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ನಮ್ಮ ಸರ್ಕಾರಗಳು ಕಾಲದಲ್ಲಿ ಉಳುವವನಿಗೆ ಭೂಮಿ, ಆಶ್ರಯ, ಆರಾಧಾನ ಕಾರ್ಯಕ್ರಮ ನೀಡಿದ್ದೆವು. ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ದೇವರು ಬಿಜೆಪಿಯ ಆಸ್ತಿಯಲ್ಲ. ದೇಶದ ಎಲ್ಲಾ ವರ್ಗದ ಜನರ ಆಸ್ತಿ. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಇರಬಾರದು. ಕಾಂಗ್ರೆಸ್ ಸರ್ಕಾರ ಪಿಂಚಣಿ ಯೋಜನೆ, ಮಧ್ಯಾಹ್ನ ಬಿಸಿಯೂಟ, ಸ್ತ್ರೀಶಕ್ತಿ, ಮನರೇಗಾ ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೆಸ್. ಉದ್ಯೋಗ ಖಾತರಿ ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಸಾಯಿಸಿದೆ. ಮತ್ತೆ ಇಂತಹ ಕಾರ್ಯಕ್ರಮವನ್ನು ನಿಮ್ಮ ಪಂಚಾಯ್ತಿಗಳಿಗೆ ನೀಡಲು ಸಾಧ್ಯವೇ ಎಂದು ಬಸವರಾಜ ಬೊಮ್ಮಾಯಿ ಹಾಗೂ ಧಾರವಾಡದ ಸಂಸದರಿಗೆ ಕೇಳಲು ಬಯಸುತ್ತೇನೆ. ನೀವುಗಳು ಮಹಾತ್ಮಾ ಗಾಂಧಿ ಹೆಸರನ್ನು ತೆಗೆದು ಅವರನ್ನು ಕೊಂದಿದ್ದೀರಿ. ನಮ್ಮ ಸರ್ಕಾರ ಕೊಟ್ಟಂತಹ ಯೋಜನೆಗಳನ್ನು ಯಡಿಯೂರಪ್ಪ, ಸದಾನಂದ ಗೌಡರು, ಜಗದೀಶ ಶೆಟ್ಟರ್ ಹಾಗೂ ಕುಮಾರಸ್ವಾಮಿ ಅವರ ಸರ್ಕಾರ ನೀಡಿತೇ?” ಎಂದು ಪ್ರಶ್ನಿಸಿದರು.

“ಸರ್ಕಾರಕ್ಕೆ ಸಾವಿರ ದಿನಗಳು ತುಂಬಿವೆ. ಈ ಸಾವಿರ ದಿನಗಳಲ್ಲಿ ರಾಜ್ಯದಲ್ಲಿ ದೊಡ್ಡ ಬದಲಾವಣೆಯಾಗಿದೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ, ಆದರ್ಶ ಇಲ್ಲದೆ ಸತ್ತರೆ ಬದುಕಿಗೆ ಅಪಮಾನ. ನಿಮ್ಮ ಋಣ ತೀರಿಸಲು ನಾವು ಇಲ್ಲಿಗೆ ಬಂದಿದ್ದೇವೆ. ನಿಮ್ಮ ಕೆಲಸ ನಮ್ಮದು. ನುಡಿದಂತೆ ನಡೆದು ನಿಮ್ಮ ಆಶೀರ್ವಾದ ಪಡೆಯಲು ನಾವಿಲ್ಲಿಗೆ ಬಂದಿದ್ದೇವೆ. ಬೆಲೆ ಏರಿಕೆ ನಿಯಂತ್ರಿಸಿ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ನಾವು ಐದು ಗ್ಯಾರಂಟಿ ಯೋಜನೆ ತಂದೆವು. ಇದು ಕಾಂಗ್ರೆಸ್ ಗ್ಯಾರಂಟಿಯಾಗಿ ಉಳಿಯಲಿಲ್ಲ. ಬಿಜೆಪಿ ಆಡಳಿತ ಬೇರೆ ರಾಜ್ಯಗಳಲ್ಲಿ ಕರ್ನಾಟಕ ಮಾದರಿಯನ್ನು ಅನುಸರಿಸಿ ಇಂದು ದೇಶದ ಗ್ಯಾರಂಟಿಯಾಗಿದೆ. ಇದಕ್ಕೆ ಕಾರಣ ನೀವು ಕೊಟ್ಟ ಮತಗಳು. ಹೀಗಾಗಿ ನಿಮಗೆ ಅಭಿನಂದನೆ ಸಲ್ಲಿಸಲು ನಾನಿಲ್ಲಿ ನಿಂತಿದ್ದೇನೆ” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News