×
Ad

ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ಆರೋಪ: ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದ್ದೇನು?

Update: 2023-07-19 17:55 IST

ಬೆಂಗಳೂರು, ಜು.19: ರಾಜಧಾನಿ ಬೆಂಗಳೂರಿನಲ್ಲಿ ಸ್ಫೋಟ ಎಸಗಲು ಸಂಚು ರೂಪಿಸಿದ್ದ ಐದು ಮಂದಿ ಆರೋಪಿಗಳನ್ನು ಬುಧವಾರ ಬೆಳಗ್ಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಬುಧವಾರ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತುರ್ತು ಮಾಧ್ಯಮಗೋಷ್ಠಿ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ನೀಡಿ,  'ಖಚಿತ ಮಾಹಿತಿಯ ಮೇರೆಗೆ ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದ ಐವರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಸಿಸಿಬಿ ಪೊಲೀಸರ ತಂಡ ಯಶಸ್ವಿಯಾಗಿದೆ' ಎಂದು ಹೇಳಿದರು. 

''ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಶಂಕಿತರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು. ಬಂಧಿತರಿಂದ ಏಳು ನಾಡ ಪಿಸ್ತೂಲ್, 45 ಜೀವಂತ ಗುಂಡುಗಳು, ವಾಕಿಟಾಕಿ ಸೇರಿದಂತೆ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆಯಲ್ಲಿ ಐವರೂ ಸಹ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿರುವುದಾಗಿ ಒಪ್ಪಿಕೊಂಡಿದ್ದಾರೆ." ಎಂದು ದಯಾನಂದ್ ಹೇಳಿದರು.

''2008ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಟಿ.ನಜೀರ್ ಹಾಗೂ 2017ರ ಕೊಲೆ ಪ್ರಕರಣದ ಆರೋಪಿ ಜುನೈದ್ ಇಬ್ಬರೂ ಸೇರಿ ಬಂಧಿತ ಸಯ್ಯದ್ ಸೋಹೆಲ್, ಮುದಾಸಿರ್, ಉಮರ್ ಮತ್ತು ಝಾಹಿದ್‌ಗೆ ತರಬೇತಿ ನೀಡಿದ್ದಾರೆ. ಸದ್ಯ ನಜೀರ್ ಜೈಲಿನಲ್ಲಿದ್ದಾನೆ. ಮತ್ತೋರ್ವ ಆರೋಪಿ ಜುನೈದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ದುಷ್ಕೃತ್ಯ ಎಸಗಲು ಶಂಕಿತರು ಏನೆಲ್ಲ ಪ್ಲಾನ್ ಮಾಡಿದ್ದರು ಎಂಬ ಬಗ್ಗೆ ತನಿಖೆ ಮಾಡಲಾಗುತ್ತದೆ. ಬಂಧಿತರನ್ನು 15 ದಿನ ಕಸ್ಟಡಿಗೆ ಪಡೆಯಲಾಗಿದೆ'' ಎಂದು ದಯಾನಂದ್ ತಿಳಿಸಿದರು.

''ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳಿಗೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸ್ನೇಹಿತ ಜುನೈದ್ ಎಂಬಾತ ಸಾಧನ ಸಲಕರಣೆಗಳ ಪೂರೈಕೆಗೆ ಸಹಾಯ ಮಾಡಿದ್ದಾನೆ. ಬೆಂಗಳೂರಿನಲ್ಲಿ ಕೃತ್ಯಗಳನ್ನು ಎಸಗಲು ಆತನೇ ನಿರ್ದೇಶನ ಕೊಟ್ಟಿದ್ದ ಎಂದು ಬಂಧಿತರು ತಿಳಿಸಿದ್ದಾರೆ. ಈ ಬಗ್ಗೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ'' ಎಂದು ಮಾಹಿತಿ ನೀಡಿದ್ದಾರೆ.

'ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಮತ್ತೊಬ್ಬ ವ್ಯಕ್ತಿಯಿಂದ ಇವರಿಗೆ ಸ್ಫೋಟಕಗಳನ್ನು ತಲುಪಿಸಿದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತದೆ' ಎಂದು ತಿಳಿಸಿದರು.

ಪ್ರಕರಣದಲ್ಲಿ ಮಹಿಳೆಯರ ಪಾತ್ರ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ' ಮಹಿಳೆಯರ ಪಾತ್ರ ಇಲ್ಲ' ಎಂದು ಸ್ಪಷ್ಟಪಡಿಸಿದರು. 




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News