×
Ad

ನ್ಯಾಯಾಂಗ ನಿಂದನೆ ಪ್ರಕರಣ: ಖಾಸಗಿ ವೈದ್ಯೆಗೆ ಒಂದು ದಿನ ಸರಕಾರಿ ಆಸ್ಪತ್ರೆ ಸೇವೆ

Update: 2023-09-29 23:11 IST

ಬೆಂಗಳೂರು, ಸೆ.29: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ವ್ಯಾಜ್ಯವೊಂದರಲ್ಲಿ ಹೈಕೋರ್ಟ್ ನೀಡಿದ್ದ ಆದೇಶ ಪಾಲಿಸದ ವೈದ್ಯೆಯೊಬ್ಬರು ಕ್ರಿಮಿನಲ್ ನ್ಯಾಯಾಂಗ ನಿಂದನೆ ವಿಚಾರಣೆಯಿಂದ ಪಾರಾಗಲು, ಆರು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳಲ್ಲಿ ಒಂದು ದಿನ ಸರಕಾರಿ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.

ಪತಿಯ ಸುಪರ್ದಿಗೆ 8 ವರ್ಷದ ಪುತ್ರಿಯನ್ನು ಒಪ್ಪಿಸುವಂತೆ ಹೈಕೋರ್ಟ್ ವೈದ್ಯೆಗೆ ಆದೇಶಿಸಿತ್ತು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ 33 ವರ್ಷದ ವೈದ್ಯೆ ಈ ಆದೇಶ ಪಾಲನೆ ಮಾಡಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್ ವೈದ್ಯೆಯ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠಕ್ಕೆ ವೈದ್ಯೆಯು ಬೇಷರತ್ ಕ್ಷಮಾಪಣೆ ಕೋರುವ ಮೂಲಕ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಡುವಂತೆ ಮುಚ್ಚಳಿಕೆಯ ಪ್ರಮಾಣ ಪತ್ರ ಸಲ್ಲಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವೈದ್ಯೆಯ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ವಿಚಾರಣೆ ಕೈಬಿಟ್ಟಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News