ಮುಂದುವರಿದ ಒತ್ತುವರಿ ತೆರವು ಕಾರ್ಯಾಚರಣೆ; ಯಲಹಂಕದಲ್ಲಿ 10 ಕೋಟಿ ರೂ. ಮೌಲ್ಯದ ಸರಕಾರಿ ಜಮೀನು ವಶಕ್ಕೆ
ಬೆಂಗಳೂರು, ಅ.6: ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಿರುವ ಕಂದಾಯ ಇಲಾಖೆ ಅಧಿಕಾರಿಗಳು, ಯಲಹಂಕ ತಾಲೂಕು, ಜಾಲ ಹೋಬಳಿ, ಕಟ್ಟಿಗೇನಹಳ್ಳಿ ಗ್ರಾಮದ ಸರ್ವೆ ನಂ.28 ರಲ್ಲಿ ಒತ್ತುವರಿಯಾಗಿದ್ದ ಸುಮಾರು 10 ಕೋಟಿ ರೂ. ಮೌಲ್ಯದ 6.05 ಎಕರೆ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಾದ್ಯಂತ ಭೂ ಒತ್ತುವರಿ ತೆರವು ಮಾಡುವಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅದರಂತೆ ಕಳೆದ ವಾರ ಯಲಹಂಕದ ಬಾಗಲೂರಿನ ಬಳಿ 25 ಕೋಟಿ ರೂ. ಮೌಲ್ಯದ 6.07 ಎಕರೆ ಸರ್ಕಾರಿ ಭೂ ಒತ್ತುವರಿ ತೆರವುಗೊಳಿಸಲಾಗಿತ್ತು. ಈಗ ಕಾರ್ಯಾಚರಣೆ ಮುಂದುವರಿಸಿ ಇನ್ನಷ್ಟು ಒತ್ತುವರಿ ತೆರವು ಮಾಡಲಾಗಿದೆ.
ಯಲಹಂಕ ತಾಲೂಕು ಜಾಲ ಹೋಬಳಿ, ಕಟ್ಟಿಗೇನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 28ರ ಜಮೀನಿಗೆ ಸಂಬಂಧಿಸಿದಂತೆ, ಗೋಮಾಳದ ಜಮೀನಿಗೆ ವಿವರವಾದ ವರದಿಯನ್ನು ದಾಖಲೆಗಳೊಂದಿಗೆ ಸಲ್ಲಿಸಲು ಮತ್ತು ಜಮೀನಿನಲ್ಲಿ ಯಾವುದೇ ಖಾತೆ ಅನುಭವವಿಲ್ಲದೇ ಇರುವ ಒತ್ತುವರಿದಾರರನ್ನು ಖುಲ್ಲಾಪಡಿಸಿ ಕ್ರಮವಹಿಸುವಂತೆ ನಿರ್ದೇಶಿಸಲಾಗಿತ್ತು.
ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 104 ರ ಅಡಿ ವಿಚಾರಣೆ ನಡೆಸಲು ನಿರ್ಧರಿಸಿ ಪ್ರತಿವಾದಿಗಳಿಗೆ ನೋಟೀಸ್ ಕೂಡ ನೀಡಲಾಗಿತ್ತು. ಅದರಂತೆ ಕಟ್ಟಿಗೇನಹಳ್ಳಿಯ ಸರ್ವೆ ಸಂಖ್ಯೆ 28 ರ ಜಮೀನಿನಲ್ಲಿ ತಾಲೂಕು ಮೋಜಿಣಿದಾರರು ಒತ್ತುವರಿ ಎಂದು ಗುರುತಿಸಿದ 6.05 ಎಕರೆ ಜಮೀನನಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ.