×
Ad

ಬೆಂಗಳೂರು: 2023ರಲ್ಲಿ 12,627 ಪ್ರಕರಣಗಳು ದಾಖಲು

Update: 2024-01-04 20:59 IST

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, 2023ರಲ್ಲಿ ದಾಖಲಾಗಿದ್ದ 12,627 ಪ್ರಕರಣಗಳ ಪೈಕಿ 3,603 ಪ್ರಕರಣಗಳನ್ನು ಭೇದಿಸಿರುವುದಾಗಿ ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಕೊಲೆ, ದರೋಡೆ, ಮನೆಗಳ್ಳತನ, ವಾಹನ ಕಳ್ಳತನ, ಅಪಹರಣ ಹಾಗೂ ಸೈಬರ್ ಅಪರಾಧ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿವೆ. ಸರಗಳ್ಳತನ, ಡ್ರಗ್ಸ್, ಜೂಜಾಟ ಪ್ರಕರಣಗಳಲ್ಲಿ ಕೊಂಚ ಮಟ್ಟದಲ್ಲಿ ಹೆಚ್ಚಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2023ರಲ್ಲಿ 205 ಕೊಲೆ, 673 ರಾಬರಿ, 1692 ಮನೆಗಳ್ಳತನ ಹಾಗೂ 5909 ವಾಹನ ಕಳ್ಳತನ ಪ್ರಕರಣ ದಾಖಲಾಗಿವೆ. ಅದೇ ರೀತಿ 2022ರಲ್ಲಿ ಒಟ್ಟಾರೆ 9,254 ಪ್ರಕರಣ ದಾಖಲಾದರೆ 2023ರಲ್ಲಿ ಒಟ್ಟು 12,627 ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 156 ಕೊಲೆ ಪ್ರಕರಣ ದಾಖಲಾಗಿದ್ದರೆ, 2023ರಲ್ಲಿ 205 ಕೊಲೆ ಪ್ರಕರಣಗಳು ದಾಖಲಾಗಿವೆ. 2022ಕ್ಕೆ ಹೋಲಿಸಿದರೆ 2023ರಲ್ಲಿ ಶೇ.31ರಷ್ಟು ಕೊಲೆ ಪ್ರಕರಣಗಳು ಹೆಚ್ಚಳವಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಸ್ಥಳದಲ್ಲೇ ಪ್ರಚೋದನೆಗೆ ಒಳಗಾಗಿ ಹತ್ಯೆ, ಅನೈತಿಕ ಸಂಬಂಧ ಹಾಗೂ ಕೌಟುಂಬಿಕ ಕಲಹಗಳಿಂದ ಹತ್ಯೆ ನಡೆದಿವೆ. ಇನ್ನೂ 2023ರಲ್ಲಿ 673 ರಾಬರಿ ಪ್ರಕರಣ ದಾಖಲಾಗಿದ್ದು, ಶೇ.41ರಷ್ಟು ಹೆಚ್ಚಳವಾಗಿದೆ. ಒಟ್ಟು ರಾಬರಿ ಪ್ರಕರಣಗಳ ಪೈಕಿ 385 ಪ್ರಕರಣಗಳು ಮೊಬೈಲ್ ದೋಚಿದ ಪ್ರಕರಣಗಳೇ ಆಗಿವೆ. 1,189 ಅಪಹರಣ ಪ್ರಕರಣ ದಾಖಲಾಗಿದ್ದು, 981 ಪ್ರಕರಣಗಳನ್ನು ಭೇದಿಸಲಾಗಿದೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಅಧಿಕವಾಗಿದ್ದು, 2022 ಹಾಗೂ 2023ರಲ್ಲಿ ಅನುಕ್ರಮವಾಗಿ 2630 ಹಾಗೂ 3260 ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2023ರಲ್ಲಿ 1135 ಲೈಂಗಿಕ ದೌರ್ಜನ್ಯ ಪ್ರಕರಣಗಳ ಪೈಕಿ, ಪತಿ ಅಥವಾ ಸಂಬಂಧಿಕರಿಂದ 696 ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ 631 ರಷ್ಟಾಗಿದೆ. ಇನ್ನು ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, 2022ರಲ್ಲಿ 9,940 ಸೈಬರ್ ಪ್ರಕರಣ ದಾಖಲಾಗಿದ್ದರೆ 2023ರಲ್ಲಿ 17,623 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರ್ಥಿಕ ಅಪರಾಧ ಪ್ರಕರಣಗಳ ಸಂಖ್ಯೆ ಅಧಿಕಗೊಂಡಂತೆ ಅವುಗಳನ್ನು ಭೇದಿಸುವ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ. 2023ರಲ್ಲಿ 17,623 ಪ್ರಕರಣಗಳ ಪೈಕಿ 1,271 ಪ್ರಕರಣಗಳನ್ನು ಮಾತ್ರ ಬೇಧಿಸಲಾಗಿದೆ. ಸೈಬರ್ ಅಪರಾಧ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿದ ಪರಿಣಾಮ ಎನ್‍ಸಿಆರ್‍ಪಿ ಪೋರ್ಟಲ್, 112 ಮುಖಾಂತರ ದೂರುಗಳನ್ನು ಎಫ್‍ಐಆರ್ ಆಗಿ ಪರಿವರ್ತನೆ ಹಾಗೂ ಸೆನ್ ಪೊಲೀಸ್ ಠಾಣೆ ಹೊರತುಪಡಿಸಿ ನಗರದ ಎಲ್ಲ ಕಾನೂನು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದರಿಂದ ಪ್ರಕರಣಗಳ ಸಂಖ್ಯೆ ಅಧಿಕಗೊಳ್ಳಲು ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

2023ರಲ್ಲಿ 639 ಜೂಜಾಟ ಪ್ರಕರಣ ದಾಖಲಾಗಿವೆ. ಇನ್ನು 6,006 ಮಂದಿ ನಾಪತ್ತೆಯಾಗಿದ್ದು, 5026 ಕಾಣೆಯಾದವರನ್ನು ಪತ್ತೆಹಚ್ಚಲಾಗಿದೆ. 2023ರಲ್ಲಿ 2,358 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪೈಕಿ 1,700 ಪುರುಷರೇ ಆಗಿದ್ದಾರೆ. ರೌಡಿ ಚಟುವಟಿಕೆ ಭಾಗಿ ಆರೋಪದಡಿ 324 ಮಂದಿ ರೌಡಿಗಳನ್ನು ಬಂಧಿಸಲಾಗಿದೆ. 2023ರಲ್ಲಿ 3,443 ಡ್ರಗ್ಸ್ ಪ್ರಕರಣಗಳಲ್ಲಿ 103.22 ಕೋಟಿ ರೂ. ಮೌಲ್ಯದ 5,387 ಕೆ.ಜಿ. ತರಹೇವಾರಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿ 4,399 ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸರು ಪ್ರಕಟನೆಯಲ್ಲಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News