×
Ad

ಫೈನಾನ್ಸ್ ಕಂಪೆನಿಗಳು ಸಾಲ ಮರುಪಾವತಿ ವಿಚಾರದಲ್ಲಿ ಜನರಿಗೆ ಕಿರುಕುಳ ನೀಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ: ಜಿಲ್ಲಾಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಸೂಚನೆ

Update: 2025-01-27 22:52 IST

ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾಲ ಮರುಪಾವತಿ ವಿಚಾರದಲ್ಲಿ ಜನರಿಗೆ ಕಿರುಕುಳ ನೀಡುವುದು ಕಂಡುಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳು 59 ಸಾವಿರ ಕೋಟಿ ರೂ. ಸಾಲ ನೀಡಿವೆ. ಅಲ್ಲದೆ, ತಮ್ಮ ಸಾಮಥ್ರ್ಯ ವಿಸ್ತರಿಸಿಕೊಳ್ಳುವ ಸಲುವಾಗಿ ಆರ್‍ಬಿಐ ಮಾನದಂಡಗಳ ಉಲ್ಲಂಘಿಸಿ ಸಾಲ ನೀಡುತ್ತಿವೆ. ಸಾಲ ನೀಡುವಾಗ ಸಾಲ ಪಡೆದವರ ಆರ್ಥಿಕ ಸಾಮಥ್ರ್ಯವನ್ನು ಕಡೆಗಣಿಸಲಾಗುತ್ತಿರುವುದು ಅಹಿತಕರ ಪ್ರಸಂಗಗಳಿಗೆ ಕಾರಣವಾಗುತ್ತಿದೆ ಎಂದರು.

ಓರ್ವ ವ್ಯಕ್ತಿಗೆ 2ಲಕ್ಷಕ್ಕಿಂತ ಹೆಚ್ಚು ಸಾಲ ನೀಡಬಾರದು ಎಂದು ಆರ್‍ಬಿಐ ಮಾನದಂಡಗಳಿವೆ. ಇದನ್ನು ಯಾರೂ ಅನುಸರಿಸುತ್ತಿಲ್ಲ. ಓರ್ವ ವ್ಯಕ್ತಿಗೆ 5-6 ಲಕ್ಷ ರೂ. ಸಾಲ ನೀಡಲಾಗುತ್ತಿದೆ. ಈ ಮೂಲಕ ಬಡವರನ್ನು ಸಾಲದ ಸುಳಿಗೆ ಸಿಲುಕಿಸಲಾಗುತ್ತಿದೆ. ಸಾಲ ಮರುಪಾವತಿ ಮಾಡದಿದ್ದರೆ ಮೈಕ್ರೋ ಫೈನಾನ್ಸ್ ಕಂಪೆನಿಗಳ ಅಸ್ಥಿತ್ವಕ್ಕೂ ತೊಂದರೆಯಾಗಲಿದೆ. ಹೀಗಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಈ ವಾರದೊಳಗೆ ಮೈಕ್ರೋ ಫೈನಾನ್ಸ್ ಕಂಪೆನಿಗಳ ಮುಖ್ಯಸ್ಥರ ಜೊತೆಗೆ ಸಭೆ ನಡೆಸಿ ಸಾಲ ವಸೂಲಾತಿಗೆ ಆರ್‍ಬಿಐ ನಿಗದಿಪಡಿಸಿರುವ ಮಾದರಿ ಕಾರ್ಯಾಚರಣೆಯನ್ನು ಪಾಲನೆ ಮಾಡಲು ಹಾಗೂ ಬೇಜಾಬ್ದಾರಿಯಿಂದ ಸಾಲ ನೀಡುವುದನ್ನೂ ನಿಗ್ರಹಿಸಲು ಸೂಚಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಮೈಕ್ರೋ ಫೈನಾನ್ಸ್ ಕಂಪೆನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಕೇಂದ್ರ ಸರಕಾರ ಯಾವುದೇ ವಿಶೇಷ ಅಧಿಕಾರ ನೀಡಿಲ್ಲ. ಆದರೆ, ರಾಜ್ಯ ಸರಕಾರವೇ ತನ್ನ ಅಧಿಕಾರದ ಮಿತಿಯಲ್ಲಿ ಬೇರೆ ಬೇರೆ ಕಾನೂನುಗಳ ಮೂಲಕ ಮೈಕ್ರೋ ಫೈನಾನ್ಸ್‍ಗಳ ಅಕ್ರಮಗಳಿಗೆ ಕಡಿವಾಣ ಹಾಕಲಿದೆ. ಇಂತಹ ಕಂಪೆನಿಗಳ ಅವ್ಯಾಹತ ಅಕ್ರಮಗಳನ್ನು ಕಂಡು ರಾಜ್ಯ ಸರಕಾರ ಸುಮ್ಮನೆ ಕೂರಲು ಸಾಧ್ಯವಿಲ್ಲ. ಇದನ್ನು ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರಕಾರ ಮಧ್ಯ ಪ್ರವೇಶಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News