ಗುಪ್ತಚರ ಇಲಾಖೆ ಕೋಮಾ ಸ್ಥಿತಿಗೆ ತಲುಪಿದೆಯೇ? : ಸಿ.ಟಿ.ರವಿ
ಬೆಂಗಳೂರು : ರಾಜ್ಯದ ಗುಪ್ತಚರ ಇಲಾಖೆ ಕೋಮಾ ಸ್ಥಿತಿಗೆ ತಲುಪಿದೆಯೇ? ಎಂದು ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಗುರುವಾರ ಬಿಜೆಪಿ ಕಾರ್ಯಾಲಯ ‘ಜಗನ್ನಾಥ ಭವನದ’ಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾಂಗ್ ರೇಪ್, ಕಾಲ್ತುಳಿತ, ಆತ್ಮಹತ್ಯೆ, ಕೊಲೆಯಂತಹ ಕಾರಣಕ್ಕೆ ಕರ್ನಾಟಕ ಸುದ್ದಿ ಆಗುವುದು ಒಳ್ಳೆಯ ಸಂಗತಿಯಲ್ಲ. ಈ ಸರಕಾರ, ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಆಡಳಿತ ನಡೆಸಲು ಆಗದೆ ಇದ್ದರೆ ಅಧಿಕಾರ ಬಿಟ್ಟು ತೊಲಗಲಿ. ನಿಮ್ಮಿಂದ ರಾಜ್ಯ ಹಾಳಾಗುವುದು ಬೇಡ ಎಂದು ಕೋರಿದರು.
ಮೂರು ತಿಂಗಳಲ್ಲಿ 340 ಅತ್ಯಾಚಾರ ಪ್ರಕರಣ ಆಗಿದೆ. ಇದೇನು ಒಳ್ಳೆಯ ಸುದ್ದಿಯೇ? ಭ್ರಷ್ಟಾ ಚಾರ, ಬೆಲೆ ಏರಿಕೆ, ಅತ್ಯಾಚಾರ, ಹತ್ಯೆ, ಉಗ್ರ ಚಟುವಟಿಕೆಗೆ ರಾಜ್ಯ ಸರಕಾರ ಸುದ್ದಿ ಆಗುತ್ತಿರುವುದು ದುರದೃಷ್ಟಕರ. ಎರಡು ದಿನಗಳ ಹಿಂದೆ ಎನ್‍ಐಎ ದಾಳಿ ಮಾಡಿ ಜೀವಾವಧಿ ಶಿಕ್ಷೆಗೆ ಒಳಗಾದ ಮೂವರನ್ನು ಬಂಧಿಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿವೆ ಎಂದು ಉಲ್ಲೇಖಿಸಿದೆ ಎಂದರು.
ಜೈಲೆಂಬ ಸೂಪರ್ ಮಾರ್ಕೆಟ್: ನಮ್ಮ ಗುಪ್ತಚರ ಇಲಾಖೆಗೆ ಜನರು ಸೇರುವುದೂ ಗೊತ್ತಾಗುವುದಿಲ್ಲ, ಜನರು ಸಾಯುವುದೂ ಗಮನಕ್ಕೆ ಬರುವುದಿಲ್ಲ ಎಂಬುದು ದುರ್ದೈವದ ಸಂಗತಿ. ಜೈಲನ್ನೆ ಒಂದು ರೀತಿಯಲ್ಲಿ ಸೂಪರ್ ಮಾರ್ಕೆಟ್ ಮಾಡಿಕೊಂಡಿದ್ದಾರೆ. ಜೈಲಿನಲ್ಲಿ ಎಲ್ಲವೂ ಸಿಗುತ್ತಿದೆ ಎಂಬುದು ರಕ್ಷಣಾ ಕ್ಷೇತ್ರದ ವೈಫಲ್ಯಕ್ಕೆ ನಿದರ್ಶನ ಎಂದು ಅವರು ದೂರಿದರು.