ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಮಾಣ ಇಳಿಕೆ: ಗೃಹ ಸಚಿವ ಡಾ.ಜಿ. ಪರಮೇಶ್ವರ್
ಗೃಹ ಸಚಿವ ಡಾ.ಜಿ.ಪರಮೇಶ್ವರ್ (File Photo)
ಬೆಳಗಾವಿ (ಸುವರ್ಣ ವಿಧಾನಸೌಧ): ಪೊಲೀಸ್ ಇಲಾಖೆ ಕೈಗೊಳ್ಳುತ್ತಿರುವ ಬಿಗಿ ಕ್ರಮಗಳಿಂದ ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿಮೆಂಟ್ ಮಂಜು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ ಅವರು, ನಾಲ್ಕು ವರ್ಷಗಳಲ್ಲಿ ಕರ್ನಾಟಕದಲ್ಲಿ 52,000 ಪ್ರಕರಣಗಳು ವರದಿಯಾಗಿವೆ. 2023ರಲ್ಲಿ 22,250 ಪ್ರಕರಣ ದಾಖಲಾಗಿದ್ದು, 6,159 ಪತ್ತೆ ಹಚ್ಚಲಾಗಿದೆ. ಸುಮಾರು 880 ಕೋಟಿ ರೂ. ವಂಚನೆ ಆಗಿದೆ. ಈ ಪೈಕಿ 177 ಕೋಟಿ ರೂ.ವಶಕ್ಕೆ ಪಡೆಯಲಾಗಿದೆ. 2024ರಲ್ಲಿ 28,478 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 2,562 ಕೋಟಿ ರೂ. ವಂಚನೆಯಾಗಿದೆ. ಇದರಲ್ಲಿ 323 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. 2025 ರಲ್ಲಿ 13,000 ಪ್ರಕರಣಗಳು ದಾಖಲಾಗಿವೆ. 2,038 ಕೋಟಿ ರೂ. ವಂಚನೆ ಆಗಿದೆ. ಈ ಪೈಕಿ 127 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಸೈಬರ್ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ. ವಂಚನೆ ಪ್ರಕರಣ ತಡೆಯಲು ಸರಕಾರ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದರು.
ಇದಕ್ಕೂ ಮೊದಲು ಬಿಜೆಪಿ ಸದಸ್ಯ ಸಿಮೆಂಟ್ ಮಂಜು ಈ ವಿಚಾರವಾಗಿ ವಿಷಯ ಪ್ರಸ್ತಾಪಿಸಿ, ಆನ್‍ಲೈನ್ ಗೇಮಿಂಗ್‍ಗೆ ಯುವಕರು ಬಲಿಯಾಗುತ್ತಿದ್ದಾರೆ. ಕ್ರಮ ಕೈಗೊಂಡರೂ ಇದು ನಿಯಂತ್ರಣಕ್ಕೆ ಬಂದಿಲ್ಲ. ಆರೋಪಿಗಳ ಬಂಧನ ಆಗಿಲ್ಲ. ಕರ್ನಾಟಕದಲ್ಲಿ ಅತ್ಯಂತ ಹೆಚ್ಚಿನ ಪ್ರಕರಣ ದಾಖಲಾಗಿದೆ. ಕೇಂದ್ರ ಸರಕಾರದ ಸಹಾಯವಾಣಿಗೆ ದೂರು ಕೊಡವಷ್ಟರಲ್ಲಿ ಹಣ ಕಳೆದುಕೊಳ್ಳುವ ಸ್ಥಿತಿ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ʼಮುಖ್ಯಮಂತ್ರಿ ಬೆಟ್ಟಿಂಗ್ ಜೋರುʼ:
‘ಸೈಬರ್ ಬೆಟ್ಟಿಂಗ್ ನಿಯಂತ್ರಣ ಮಾಡುವಲ್ಲಿ ಸರಕಾರ ಕ್ರಮ ಕೈಗೊಳ್ಳುತ್ತಿದೆ. ಇದು ಶ್ಲಾಘನೀಯ. ಆದರೆ ಇತ್ತೀಚಿನ ದಿನಗಳಲ್ಲಿ ಸಿಎಂ ಯಾರಾಗಬೇಕು ಎಂಬ ಬಗ್ಗೆ ಬೆಟ್ಟಿಂಗ್ ನಡೆಯುತ್ತಿದೆ. ಇದರ ಬಗ್ಗೆ ಸರಕಾರ ಏನು ಕ್ರಮ ಕೈಗೊಂಡಿದೆ’ ಎಂದು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಕಾಲೆಳೆದರು.