×
Ad

ʼಹೊದ್ದುಕೊಳ್ಳಲು ಸರಿಯಾದ ಹೊದಿಕೆ ಇಲ್ಲ, ಚಳಿಯಿಂದಾಗಿ ರಾತ್ರಿ ನಿದ್ರೆ ಬರುತ್ತಿಲ್ಲʼ: ನ್ಯಾಯಾಧೀಶರ ಮುಂದೆ ದರ್ಶನ್ ಅಳಲು

Update: 2025-11-19 23:13 IST

ದರ್ಶನ್‌

ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಚಳಿ ಹೆಚ್ಚಾಗಿದ್ದು, ಸೂಕ್ತ ಹೊದಿಕೆಯಿಲ್ಲದ ಕಾರಣ ರಾತ್ರಿ ವೇಳೆ ನಿದ್ರೆ ಮಾಡಲಾಗುತ್ತಿಲ್ಲ. ಚಿಕ್ಕ ಹೊದಿಕೆಯನ್ನೇ ಸುತ್ತಿಕೊಂಡು ಜೈಲು ಕೋಣೆಯ ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದೇನೆ ಎಂದು ನಟ ದರ್ಶನ್‌ ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ಮುಂದೆ ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಆರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಬುಧವಾರ ಹಾಜರುಪಡಿಸಲಾಯಿತು. ಉಳಿದಂತೆ ಜಾಮೀನು ಪಡೆದಿರುವ ಎಲ್ಲ 11 ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗಿದ್ದರು.

ಆರೋಪಿಗಳ ಹಾಜರಾತಿಯನ್ನು ನ್ಯಾಯಮೂರ್ತಿ ಐ.ಪಿ. ನಾಯ್ಕ್‌ ಅವರು ದಾಖಲಿಸಿಕೊಂಡರು. ಈ ವೇಳೆ ಆರೋಪಿ ನಾಗರಾಜು ಮಾತನಾಡಿ, ಸ್ವಾಮಿ.. ಒಂದು ವಿಷಯನ್ನು ನಿಮಗೆ ವಿನಂತಿ ಮಾಡಿಕೊಳ್ಳಬೇಕಿದೆ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.

ನ್ಯಾಯಮೂರ್ತಿಗಳು ಏನು ಎಂದು ಕೇಳಿದಾಗ ಉತ್ತರಿಸಿದ ನಾಗರಾಜು, ಜೈಲಿನ ಆವರಣದಲ್ಲಿ ತುಂಬ ಚಳಿ ಇದೆ. ಜೈಲಿನ ಅಧಿಕಾರಿಗಳು ನೀಡಿರುವ ಹೊದಿಕೆ ಚಳಿ ತಡೆಯುತ್ತಿಲ್ಲ. ಮನೆಯಿಂದ ತಂದ ಹೊದಿಕೆಯನ್ನೂ ಪಡೆಯುವುದಕ್ಕೂ ಅನುಮತಿ ನೀಡುತ್ತಿಲ್ಲ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.

ಆಗ ನಟ ದರ್ಶನ್‌, ಸ್ವಾಮಿ.. ಜೈಲಿನಲ್ಲಿ ತುಂಬಾ ಚಳಿಯಿದೆ. ಜೈಲು ಅಧಿಕಾರಿಗಳು ನೀಡಿರುವ ಹೊದಿಕೆಗಳು ಚಳಿಯನ್ನು ತಡೆಯುತ್ತಿಲ್ಲ. ಇದರಿಂದ, ರಾತ್ರಿ ವೇಳೆ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಚಿಕ್ಕ ಹೊದಿಕೆಯನ್ನೇ ಸುತ್ತಿಕೊಂಡು ಜೈಲು ಕೋಣೆಯ ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದೇನೆ. ದಯವಿಟ್ಟು ಚಳಿ ತಡೆಯುವಂತಹ ಉತ್ತಮ ಹೊದಿಕೆಗಳನ್ನು ಒದಗಿಸಲು ಜೈಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕೋರಿದರು.

ಆಗ ನ್ಯಾಯಾಧೀಶರು, ಆರೋಪಿಗಳೇ‌ನು ರತ್ನಗಂಬಳಿ ಕೇಳುತ್ತಿದ್ದಾರೆಯೇ? ಜೈಲಿನ ಕೈಪಿಡಿಯಲ್ಲಿ ಅವಕಾಶವಿರುವ ಸೌಲಭ್ಯಗಳನ್ನು ಆರೋಪಿಗಳಿಗೆ ಕೊಡಿ. ಈ ವಿಚಾರದಲ್ಲಿ ನ್ಯಾಯಾಲಯ ಪದೇಪದೆ ಸೂಚನೆ ನೀಡಬೇಕಾ? ಎಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಿದ್ದ ಜೈಲು ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಪ್ರಕರಣದ ವಿಚಾರಣೆಯನ್ನು ಡಿ.3ಕ್ಕೆ ಮುಂದೂಡಿದ ನ್ಯಾಯಾಧೀಶರು, ಅಂದು ಪ್ರಕರಣದ ಎಲ್ಲ ಆರೋಪಿಗಳು ವಿಚಾರಣೆಗೆ ಹಾಜರಿರಬೇಕು ಎಂದು ಸೂಚಿಸಿದರು.

ಹಣ ಸುಪರ್ದಿಗೆ ಕೋರಿದ ಐಟಿ ಇಲಾಖೆ:

ಈ ವೇಳೆ ಆದಾಯ ತೆರಿಗೆ ಇಲಾಖೆಯ ಪರ ವಕೀಲರು, ಪ್ರಕರಣ ಸಂಬಂಧ ಆರೋಪಿಗಳಿಂದ ವಶಕ್ಕೆ ಪಡೆದಿರುವ ಹಣವನ್ನು ತಮ್ಮ ಸುಪರ್ದಿಗೆ ನೀಡಬೇಕು ಎಂದು ಕೋರಿದರು. ತನಿಖಾಧಿಕಾರಿಗಳ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜುಕ ಪಿ. ಪ್ರಸನ್ನ ಕುಮಾರ್‌ ಅವರು, ಆದಾಯ ತೆರಿಗೆ ಇಲಾಖೆಯ ಅರ್ಜಿಗೆ ತಮ್ಮದೇನೂ ತಕರಾರು ಇಲ್ಲ ಎಂದರು.

ಅದಕ್ಕೆ ಆಕ್ಷೇಪಿಸಿದ ದರ್ಶನ್‌ ಪರ ವಕೀಲ ಸುನೀಲ್‌ ಅವರು, ಆದಾಯ ತೆರಿಗೆ ಇಲಾಖೆಗೂ ಈ ಪ್ರಕರಣದಲ್ಲಿ ಜಪ್ತಿ ಮಾಡಲಾಗಿರುವ ಹಣಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಆರೋಪಿಗಳಿಂದ ವಶಕ್ಕೆ ಪಡೆದಿರುವ ಹಣವನ್ನು ಅದರ ಸುಪರ್ದಿಗೆ ನೀಡಬಾರದು ಎಂದು ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News