×
Ad

ದಸರಾ ಹಬ್ಬದ ಜತೆಗೆ ʼಕಾವೇರಿ ಆರತಿʼ ಕಾರ್ಯಕ್ರಮಕ್ಕೆ ಸಿದ್ಧತೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-05-03 18:28 IST

ಬೆಂಗಳೂರು : ಈ ವರ್ಷ ದಸರಾ ಹಬ್ಬದ ಜತೆಗೆ ಕಾವೇರಿ ಆರತಿ ಕಾರ್ಯಕ್ರಮ ಮಾಡಲು ಸರಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆಯಾಗಿದೆ. ಈ ಭಾಗದ ರೈತರು ಭತ್ತ, ಕಬ್ಬು ಬೆಳೆಯುತ್ತಿದ್ದಾರೆ. ಕಾವೇರಿ ಆರತಿ ಕಾರ್ಯಕ್ರಮ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಬೃಂದಾವನ ಉದ್ಯಾನವನದಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ ಹಾಗೂ ಕಾವೇರಿ ಆರತಿ ಕಾರ್ಯಕ್ರಮ ನಡೆಸುವ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕರ್ನಾಟಕದ ಸಂಸ್ಕೃತಿ, ತಮಿಳುನಾಡು ಹಾಗೂ ಕೇರಳ ಸಂಪ್ರದಾಯಗಳನ್ನು ಒಳಗೊಂಡಂತೆ ಕಾವೇರಿ ಆರತಿ ಕಾರ್ಯಕ್ರಮ ನಡೆಸಲು ಚರ್ಚೆ ಮಾಡಲಾಗಿದೆ. ತಮಿಳುನಾಡಿಗೆ ಪ್ರತಿ ವರ್ಷ 177 ಟಿಎಂಸಿ ನೀರನ್ನು ಬಿಡಬೇಕಿದೆ. ಕಾವೇರಿ ಆರತಿ ಘೋಷಣೆ ಮಾಡಿದ ನಂತರ ತಮಿಳುನಾಡಿಗೆ 295 ಟಿಎಂಸಿ ನೀರು ಹರಿದಿದೆ. ಆಮೂಲಕ 118 ಟಿಎಂಸಿ ನೀರು ಹೆಚ್ಚುವರಿಯಾಗಿ ಹರಿದಿದೆ. ಬೆಂಗಳೂರಿನಲ್ಲೂ ಸ್ಯಾಂಕಿ ಕೆರೆಯಲ್ಲಿ ವಿಶ್ವ ಜಲದಿನದಂದು ಆರತಿ ಕಾರ್ಯಕ್ರಮ ಮಾಡಲಾಗಿತ್ತು ಎಂದು ಶಿವಕುಮಾರ್ ಹೇಳಿದರು.

ಈ ಕಾರ್ಯಕ್ರಮ ವಾರದಲ್ಲಿ ಎಷ್ಟು ದಿನ ಇರಬೇಕು, ಪೂಜಾ ಕಾರ್ಯಗಳು ಯಾವ ರೀತಿ ನೆರವೇರಬೇಕು ಎಂದು ಚರ್ಚೆ ಮಾಡಲಾಗಿದೆ. ಕಾವೇರಿ ನದಿಯಿಂದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುತ್ತಿದೆ. ನಮ್ಮ ಧಾರ್ಮಿಕ ಹಾಗೂ ಸಂಸ್ಕೃತಿ ಒಳಗೊಂಡಂತೆ ಈ ಕಾರ್ಯಕ್ರಮವನ್ನು ನೀರಾವರಿ, ಪ್ರವಾಸೋದ್ಯಮ, ಧಾರ್ಮಿಕ ದತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮ ಸಂಬಂಧ ಬೆಂಗಳೂರು ಜಲಮಂಡಳಿ ಮುಖ್ಯಸ್ಥ ರಾಮ್ ಪ್ರಸಾತ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಮಂಡ್ಯ ಉಪ ಆಯುಕ್ತರು ಇದರ ಉಸ್ತುವಾರಿ ವಹಿಸಲಿದ್ದಾರೆ. ಧಾರ್ಮಿಕ ದತ್ತಿ ಇಲಾಖೆ ಪೂಜಾ ಕಾರ್ಯಕ್ರಮಗಳ ರೂಪುರೇಷೆ ನೋಡಿಕೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ರೂಪ ನೀಡಲು ಕನ್ನಡ ಮತ್ತು ಸಂಸ್ಕೃತಿ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ನೀರಾವರಿ ಇಲಾಖೆಯಿಂದ ಈ ಕಾರ್ಯಕ್ರಮಕ್ಕೆ ಅಗತ್ಯ ಮೂಲಸೌಕರ್ಯ ವಹಿಸಲಾಗುವುದು. ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಪ್ರವಾಸೋದ್ಯಮ ಇಲಾಖೆ ಸಲಹೆ ನೀಡಲಿದೆ. ಇದರ ಜತೆಗೆ ವಿಶೇಷ ದೀಪಾಲಂಕಾರ, ಕಾರಂಜಿ ವ್ಯವಸ್ಥೆ ಮಾಡಲಾಗುವುದು. ಪ್ರವಾಸಿಗರಿಗೆ ಆಕರ್ಷಣೀಯವಾಗಿ ಕಾರ್ಯಕ್ರಮ ರೂಪಿಸಲಾಗಿದ್ದು, ಬೆಂಗಳೂರು, ಮೈಸೂರಿನಿಂದ ಜನರು ಹೋಗಿ ಪೂಜೆ ಸಲ್ಲಿಸಿ ವಾಪಸ್ಸಾಗಲು ಅನುಕೂಲವಾಗುವಂತೆ ರಸ್ತೆ ಉನ್ನತೀಕರಣ ಮಾಡಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಇನ್ನು ನಾಲ್ಕು ಗ್ರಾಮ ಪಂಚಾಯ್ತಿಗಳನ್ನು ಸೇರಿಸಿ ಯೋಜನಾ ಪ್ರಾಧಿಕಾರವನ್ನು ಮಾಡಲು ತೀರ್ಮಾನಿಸಲಾಗಿದೆ. ಉಳಿದಂತೆ ಇದಕ್ಕೆ ಸಂಬಂಧಪಟ್ಟ ಟೆಂಡರ್ ಕರೆಯಲು ಸೂಚಿಸಲಾಗಿದೆ. ನೀರಾವರಿ ಇಲಾಖೆಯಿಂದ ಇದಕ್ಕೆ ಸುಮಾರು 100 ಕೋಟಿಯಷ್ಟು ಹಣ ಮೀಸಲಿಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಕೂಡ ಇದರ ಜವಾಬ್ದಾರಿ ವಹಿಸಲಿವೆ ಎಂದು ಅವರು ಹೇಳಿದರು.

ಇಂತಹ ಕಾರ್ಯಕ್ರಮಕ್ಕೆ ಅನುದಾನ ನೀಡುವುದು ಕಷ್ಟ ಎಂದು ಆರ್ಥಿಕ ಇಲಾಖೆ ಶಿಫಾರಸ್ಸು ಮಾಡಿದೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಯಾರು ಏನೇ ಶಿಫಾರಸ್ಸು ಮಾಡಿದರೂ ಅಂತಿಮವಾಗಿ ಸರಕಾರ ಅಂತಿಮ ತೀರ್ಮಾನ ಮಾಡುತ್ತದೆ. ಈ ಕಾವೇರಿ ಆರತಿ ಮಾಡಲು ನಮ್ಮ ಸರಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಎಷ್ಟು ಜನರು ವೀಕ್ಷಣೆ ಮಾಡಲು ಅವಕಾಶವಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಸುಮಾರು 10 ಸಾವಿರ ಜನ ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಯಾವ ರೀತಿ ಆಸನ ವ್ಯವಸ್ಥೆ ಮಾಡಬೇಕು? ಎಷ್ಟು ಜಾಗದ ಅಗತ್ಯವಿದೆ, ಮಳೆ ಬಂದರೆ ಏನು ಮಾಡಬೇಕು, ಕಲಾವಿದರು, ಪೂಜೆ ನೆರವೇರಿಸುವರಿಗೆ ಸ್ಥಳಾವಕಾಶ ಸೇರಿದಂತೆ ಎಲ್ಲದಕ್ಕೂ ನೀಲನಕ್ಷೆ ರೂಪಿಸುವಂತೆ ಸಮಿತಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕಾಗಿ ಪ್ರತ್ಯೇಕವಾದ ಮೂಲಸೌಕರ್ಯಗಳನ್ನು ಕಲ್ಪಿಸಬೇಕಿದೆ. ಭದ್ರತೆ, ಸಂಚಾರಿ ವ್ಯವಸ್ಥೆ, ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಈಗ ಇರುವ ವ್ಯವಸ್ಥೆಯನ್ನು ಹೊರತುಪಡಿಸಿ ಹೊಸದಾಗಿ ವ್ಯವಸ್ಥೆ ಕಲ್ಪಿಸಬೇಕಿದೆ. ಸಾಂಸ್ಕೃತಿಕ ಹಾಗೂ ಧಾರ್ಮಿಕ ತಂಡಗಳಿಗೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಆಣೆಕಟ್ಟೆಯ ಸಮೀಪ ಮಾಡಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಭದ್ರತೆ ದೃಷ್ಟಿಯಿಂದ ಈ ಕಾರ್ಯಕ್ರಮದ ವೇದಿಕೆಯನ್ನು ಆಣೆಕಟ್ಟೆಯಿಂದ ಸ್ವಲ್ಪ ದೂರದಲ್ಲಿ, ಸದಾ ನೀರು ಇರುವಂತಹ ಜಾಗದಲ್ಲಿ ಮಾಡಬೇಕಿದೆ. ಬೆಂಗಳೂರಿಗೆ ನೀರು ಹೋಗುವ ಒಂದು ಜಾಗವನ್ನು ಗುರುತಿಸಲಾಗಿದೆ. ಇದರ ಜವಾಬ್ದಾರಿಯನ್ನು ತಾಂತ್ರಿಕ ಸಮಿತಿಗೆ ವಹಿಸಿದ್ದು, ಆ ಸಮಿತಿ ಇದನ್ನು ಅಂತಿಮವಾಗಿ ತೀರ್ಮಾನಿಸಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಶಾಸಕ ರವಿ ಕುಮಾರ್ ಗಣಿಗ, ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಮಂಡ್ಯ ಜಿಲ್ಲಾಧಿಕಾರಿ ಕುಮಾರ್, ತಾಂತ್ರಿಕ ಸಲಹೆಗಾರ ಜೈಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News