×
Ad

ಹೇಮಾವತಿ ಲಿಂಕ್ ಕೆನಾಲ್ | ತುಮಕೂರಿನ ಎಲ್ಲಾ ತಾಲೂಕಿಗೂ ನೀರು ಒದಗಿಸಲು ಅಗತ್ಯ ಕ್ರಮ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-07-05 15:28 IST

ಬೆಂಗಳೂರು : "ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ. ಎಲ್ಲಾ ತಾಲೂಕಿಗೂ ನೀರು ಒದಗಿಸಲು ಯೋಜನೆ ರೂಪಿಸಲಾಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯಿಸಿದರು.

"ಹೇಮಾವತಿ ಲಿಂಕ್ ಕೆನಾಲ್ ವಿಚಾರವಾಗಿ ಜನಪ್ರತಿನಿಧಿಗಳ ಸಭೆ ಕರೆದು, ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಹಿಂದೆ ಶಾಸಕರು ತಾಂತ್ರಿಕ ಸಮಿತಿ ರಚಿಸಿ ಎಂದಿದ್ದರು. ತಾಂತ್ರಿಕ ಸಮಿತಿ ವರದಿ ನಂತರ ಕಾಮಗಾರಿಗೆ ಮುಂದಾದರೂ ಮತ್ತೆ ಪ್ರತಿಭಟನೆ ಮಾಡಿದ್ದರು. ಅವರು ಪೈಪ್ ಲೈನ್ ಹಾಕಬೇಡಿ ತೆರೆದ ಕಾಲುವೆಯಲ್ಲಿ ನೀರು ತೆಗೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಪೈಪ್ ಲೈನ್ ಮಾಡುವುದು ಸರಕಾರದ ತೀರ್ಮಾನ" ಎಂದು ತಿಳಿಸಿದರು.

"ಕೇಂದ್ರ ಸಚಿವ ಸೋಮಣ್ಣ ಅವರು ಭಾರತೀಯ ವಿಜ್ಞಾನ ಸಂಸ್ಥೆ ತಜ್ಞರಿಂದ ಪರಿಶೀಲನೆಗೆ ಶಿಫಾರಸ್ಸು ಮಾಡಿದ್ದು, ಇದಕ್ಕೆ ಒಪ್ಪಿಗೆ ನೀಡಲಾಗಿದೆ. ನಮಗೆ ಕೇವಲ ಕುಣಿಗಲ್ ತಾಲೂಕು ಮಾತ್ರವಲ್ಲ. ಇಡೀ ತುಮಕೂರು ಜಿಲ್ಲೆಗೆ ನೀರು ಒದಗಿಸಬೇಕಿದ್ದು, ಅದಕ್ಕೆ ಪೂರಕವಾಗಿ ನಾನು ಯೋಜನೆ ಸಿದ್ಧಪಡಿಸಿದ್ದೇನೆ. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ನೀರನ್ನು ಹಂಚಲಾಗುವುದು. ಜಿಲ್ಲೆಯ ಎಲ್ಲಾ ತಾಲ್ಲೂಕಿನ ಹಿತಕಾಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.

"ನಮ್ಮ ಸರಕಾರ ಇದ್ದಾಗ ಯೋಜನೆ ಆರಂಭಿಸಿ ಕಾಮಗಾರಿ ನಡೆಸಿದ್ದೆವು. ಬಿಜೆಪಿ ಸರಕಾರ ಇದನ್ನು ನಿಲ್ಲಿಸಿತ್ತು. ನನ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ವಾಪಸ್ ಪಡೆದರು. ಈ ಯೋಜನೆ ಮುಂದುವರಿಸುವುದಾಗಿ ಯಡಿಯೂರಪ್ಪ ಹೇಳಿದರೂ ನಂತರ ಅದನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿದರು. ಇದೆಲ್ಲವೂ ಸರಕಾರದ ತೀರ್ಮಾನ. ಮೆಡಿಕಲ್ ಕಾಲೇಜು ನಿರ್ಮಾಣದ ಯೋಜನೆ 600 ಕೋಟಿಯಿಂದ 900 ಕೋಟಿಗೆ ಏರಿಕೆಯಾಗಿದೆ. ಇದಕ್ಕೆ ಜವಾಬ್ದಾರಿ ಯಾರು?" ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News