ಕಪ್ ಗೆದ್ದು ಬೆಂಗಳೂರಿಗೆ ಬಂದ ಆರ್‌ಸಿಬಿ: ಕನ್ನಡ ಧ್ವಜ ನೀಡಿ ಸ್ವಾಗತಿಸಿದ ಡಿಸಿಎಂ
ಬೆಂಗಳೂರು : 18ನೇ ಆವೃತ್ತಿಯ ಐಪಿಎಲ್ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಗೆದ್ದು ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಬೆಂಗಳೂರಿಗೆ ಬಂದಿಳಿದಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಅಹ್ಮದಾಬಾದ್‌ನಿಂದ ವಿಮಾನದ ಮೂಲಕ ಬೆಂಗಳೂರಿಗೆ ಬಂದ ಆರ್‌ಸಿಬಿ ಆಟಗಾರರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕನ್ನಡ ಧ್ವಜ ನೀಡಿ ಸ್ವಾಗತಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರು, ವೆಲ್‌ಕಮ್ ಬಾಯ್ಸ್, 18 ವರ್ಷಗಳ ಕನಸನ್ನು 18ನೇ ಐಪಿಎಲ್ ಆವೃತ್ತಿಯಲ್ಲಿ ನನಸು ಮಾಡಿ, ನಮ್ಮ ಹುಡುಗ್ರು ತವರಿನ ಅಂಗಳಕ್ಕೆ ವಾಪಸ್ಸಾಗಿದ್ದಾರೆ. ಈ ಶುಭ ಸಂದರ್ಭದಲ್ಲಿ, ಇತಿಹಾಸ ಸೃಷ್ಟಿಸಿದ ಆರ್‌ಸಿಬಿ ತಂಡಕ್ಕೆ ಕರ್ನಾಟಕದ ಮಣ್ಣಿನಿಂದ ಪ್ರೀತಿಯ, ಭವ್ಯ ಸ್ವಾಗತ ಎಂದು ಖುಷಿ ಹಂಚಿಕೊಂಡಿದ್ದಾರೆ.
ಇನ್ನು ಕೆಲವೇ ಹೊತ್ತಿನಲ್ಲಿ ವಿಧಾನಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆರ್‌ಸಿಬಿ ಆಟಗಾರರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿಕುಮಾರ್ ಸನ್ಮಾನಿಸಲಿದ್ದಾರೆ.
ವಿಧಾನಸೌಧದ ಮುಂದೆ ಜನಸಾಗರ :
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆರ್‌ಸಿಬಿ ಆಟಗಾರರಿಗೆ ಅಭಿನಂದನಾ ಸಮಾರಂಭ ನಡೆಯಲಿದ್ದು, ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿದೆ. ತಂಡದ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ವಿಧಾನಸೌಧದ ಮುಂದೆ ನೆರೆದಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.