×
Ad

ಹೈಕೋರ್ಟ್ ನ 6 ನ್ಯಾಯಾಮೂರ್ತಿಗಳಿಗೆ ಕೊಲೆ ಬೆದರಿಕೆ: ಎಫ್‍ಐಆರ್ ದಾಖಲು

Update: 2023-07-24 20:20 IST

ಬೆಂಗಳೂರು, ಜು.24: ಹೈಕೋರ್ಟ್‍ನ ಆರು ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿ, 50 ಲಕ್ಷ ರೂ. ಗಳಿಗೆ ಬೇಡಿಕೆ ಇಟ್ಟು ಹಣವನ್ನು ಬ್ಯಾಂಕ್ ಖಾತೆಗೆ ಹಾಕುವಂತೆ ಸಂದೇಶ ಬಂದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ನಗರದ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಹೈಕೋರ್ಟ್‍ನ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‍ಒ) ಕೆ.ಮುರಳೀಧರ್ ಅವರ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಸಂದೇಶವನ್ನು ಕಳುಹಿಸುವ ಮೂಲಕ ಅಪರಿಚಿತ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ್ದಾನೆ. ಅದಲ್ಲದೇ ಪಾಕಿಸ್ತಾನದ ಅಲೈಡ್ ಬ್ಯಾಂಕ್ ಲಿಮಿಟೆಡ್‍ನಲ್ಲಿರುವ ಬ್ಯಾಂಕ್ ಖಾತೆಗೆ 50 ಲಕ್ಷ ರೂ. ಹಣವನ್ನು ಜಮೆ ಮಾಡುವಂತೆ ಜು.12ರಂದು ವಾಟ್ಸಾಪ್‍ಗೆ ಸಂದೇಶ ಕಳುಹಿಸಿ ಬೇಡಿಕೆ ಇಟ್ಟಿದ್ದಾನೆ ಎಂದು ಎಫ್‍ಐಆರ್‍ನಲ್ಲಿ ದಾಖಲಾಗಿದೆ.

ದುಬೈ ಗ್ಯಾಂಗ್ ಮೂಲಕ ತಮ್ಮನ್ನು ಸೇರಿ ರಾಜ್ಯ ಹೈಕೋರ್ಟ್‍ನ ನ್ಯಾಯಮೂರ್ತಿಗಳಾದ ಮುಹಮ್ಮದ್ ನವಾಝ್, ಎಚ್.ಟಿ.ನರೇಂದ್ರ ಪ್ರಸಾದ್, ಅಶೋಕ್ ಜಿ. ನಿಜಗಣ್ಣವರ್, ಎಚ್.ಪಿ.ಸಂದೇಶ್, ಕೆ.ನಟರಾಜನ್ ಹಾಗೂ ಬಿ.ವೀರಪ್ಪ ಅವರುಗಳನ್ನು ಕೊಲ್ಲುವುದಾಗಿ ವಾಟ್ಸಾಪ್ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಕೆ.ಮುರಳೀಧರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹೈಕೋರ್ಟ್ ಪಿಆರ್‍ಒ ಕೆ.ಮುರಳೀಧರ್ ಅವರ ದೂರನ್ನು ಆಧರಿಸಿ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News