×
Ad

ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಹಿಂಪಡೆಯಲು ನಿರ್ಧಾರ; ಬಿಜೆಪಿಯಿಂದ ಪ್ರತಿಭಟನೆಯ ಎಚ್ಚರಿಕೆ

Update: 2023-11-24 18:31 IST

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಹೊರಡಿಸಿದ್ದ ಆದೇಶ ಹಿಂಪಡೆಯಲು ಸಚಿವ ಸಂಪುಟದ ತೀರ್ಮಾನಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಾಳೆ(ನ.25) ಪ್ರತಿಭಟನೆಗೆ ನಿರ್ಧರಿಸಿದೆ.

ಸಂಪುಟದ ನಿರ್ಧಾರವನ್ನು ವಿರೋಧಿಸಿ ನಾಳೆ ಬೆಳಗ್ಗೆ 10 ಗಂಟೆಗೆ ಬಿಜೆಪಿ ವತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಸಂಸದರು, ಶಾಸಕರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸರಕಾರದ ಕಾನೂನುಬಾಹಿರ ಹಾಗೂ ತಪ್ಪು ನಿರ್ಧಾರವನ್ನು ಖಂಡಿಸಿ ಈ ಪ್ರತಿಭಟನೆ ನಡೆಯಲಿದೆ’ ಎಂದು ಬಿಜೆಪಿ ತಿಳಿಸಿದೆ.

ಸಂಪುಟದ ನಿರ್ಧಾರ ಕಾನೂನುಬಾಹಿರ: ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಂಪುಟ ಕೈಗೊಂಡ ನಿರ್ಧಾರವು ಸಂಪೂರ್ಣವಾಗಿ ಕಾನೂನುಬಾಹಿರ. ಆದಾಯ ತೆರಿಗೆ ಇಲಾಖೆ ದಾಳಿ ಆದಾಗ ಬೆಂಗಳೂರು ಮತ್ತು ದೇಶದ ವಿವಿಧೆಡೆ ಲಭಿಸಿದ ಹಣದ ವಿಷಯ ಎಲ್ಲರಿಗೂ ತಿಳಿದಿದೆ. ಬಳಿಕ ಜಾರಿ ನಿರ್ದೇಶನಾಲಯವು ಹಲವು ವರ್ಷಗಳಿಂದ ತನಿಖೆ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದ ಈ ನಿರ್ಧಾರ ಕಾನೂನಿನ ವಿರುದ್ಧವಾಗಿ ತೆಗೆದುಕೊಂಡ ನಿರ್ಧಾರ. ಡಿ.ಕೆ. ಶಿವಕುಮಾರ್ ಯಾಕಾಗಿ ತನಿಖೆಗೆ ಭಯ ಪಡುತ್ತಾರೆ? ಅವರಿಗೆ ಕಾನೂನಿನ ಮೇಲೆ ವಿಶ್ವಾಸ ಇಲ್ಲವೇ?’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.

ರಾಜ್ಯಪಾಲರ ಮಧ್ಯಪ್ರವೇಶ: ‘ಡಿಕೆಶಿ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ಸಂಪುಟ ವಾಪಾಸ್ ಪಡೆದಿದೆ. ಇದು ಸಂವಿಧಾನ ವಿರೋಧಿ ಕ್ರಮ. ರಾಜ್ಯಪಾಲರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಒಬ್ಬ ಭ್ರಷ್ಟ ಆರೋಪಿ ಸಮರ್ಥನೆಗೆ ಇಡೀ ಸಚಿವ ಸಂಪುಟ ನಿಂತದ್ದು ಕರ್ನಾಟಕದ ಘನತೆಗೆ ಕಪ್ಪುಚುಕ್ಕೆ ಇಟ್ಟಂತೆ. ಸಿಬಿಐ ತನಿಖೆ ವಿಚಾರದಲ್ಲಿ ಭಯ ಯಾಕೆ? ಸಿಬಿಐ ಸಾಕ್ಷ್ಯಾಧಾರ ಇಲ್ಲದ ವರದಿ ಕೊಟ್ಟರೆ ಅದು ಕೋರ್ಟ್ ಎದುರು ಸಾಬೀತಾಗುತ್ತದೆಯೇ? ಬಡವರಿಗೊಂದು ನ್ಯಾಯ, ಬಲಾಢ್ಯರಿಗೊಂದು ನ್ಯಾಯವೇ?’ ಸಿ.ಟಿ.ರವಿ ಬಿಜೆಪಿ ಮುಖಂಡ ಅಸಮಾಧಾನ ವ್ಯಕ್ತಪಡಿಸಿದರು.

ಸಿಬಿಐ ಮೇಲೆ ಭಯ ಏಕೆ?: ‘ಕಾನೂನು ವ್ಯವಸ್ಥೆಯ ಅಣಕ ಮಾಡುವುದು  ಕೆಲ ಪ್ರಭಾವಿ ರಾಜಕಾರಣಿಗಳಿಗೆ ಅಭ್ಯಾಸ ಆಗಿರುವುದು ದುರಂತ. ಸಂಪುಟದಲ್ಲಿರುವ ಯಾವುದೇ ಸಚಿವರು ಇದು ಚರ್ಚೆಯಾಗಬೇಕೆಂದು ಹೇಳದೆ, ಇದಕ್ಕೆ ಒಪ್ಪಿಗೆ ನೀಡಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕುತ್ತದೆ. ಇವರು ಯಾವುದೇ ತಪ್ಪು ಮಾಡಿಲ್ಲವೆಂದರೆ, ಸಿಬಿಐ ಮೇಲೆ ಭಯ ಏಕೆ?’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News