ʼದೀಪಿಕಾ ವಿದ್ಯಾರ್ಥಿವೇತನʼ ಲೋಕಾರ್ಪಣೆ | 37 ಸಾವಿರ ವಿದ್ಯಾರ್ಥಿನಿಯರಿಗೆ ಅನುಕೂಲ : ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಸೆ.19: ಪ್ರತಿಷ್ಠಿತ ಐಟಿ ದಿಗ್ಗಜ ಅಝೀಂ ಪ್ರೇಮ್‍ಜಿ ತಮ್ಮ ಫೌಂಡೇಶನ್‍ನ ಮೂಲಕ ಜನಪರ ಕಾರ್ಯಗಳನ್ನು ಕೈಗೊಂಡಿದ್ದು, ‘ದೀಪಿಕಾ ವಿದ್ಯಾರ್ಥಿ ವೇತನ’ದಿಂದ ಸರಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ 37 ಸಾವಿರ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಉನ್ನತ ಶಿಕ್ಷಣ ಇಲಾಖೆ ಮತ್ತು ಅಝಿಂ ಪ್ರೇಮ್‍ಜಿ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿದ್ದ ‘ದೀಪಿಕಾ ವಿದ್ಯಾರ್ಥಿವೇತನ ಲೋಕಾರ್ಪಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಝೀಂ ಪ್ರೇಮ್‍ಜಿ ಫೌಂಡೇಶನ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ಪೂರೈಸುತ್ತಿದೆ. ಅಲ್ಲದೇ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣದಲ್ಲಿ ತೊಡಗುವಂತಾಗುವ ದೃಷ್ಠಿಯಿಂದ ‘ದೀಪಿಕಾ ವಿದ್ಯಾರ್ಥಿವೇತನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.
ಈ ಯೋಜನೆಯಡಿ ಪದವಿ ಕೋರ್ಸ್ ಪೂರ್ಣಗೊಳಿಸಿದ 37 ಸಾವಿರ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ 30 ಸಾವಿರ ರೂ.ಗಳನ್ನು ವಿದ್ಯಾರ್ಥಿವೇತನವಾಗಿ ನೀಡಲಾಗುತ್ತದೆ. ಈ ಯೋಜನೆಯ ಲಾಭ ಪಡೆಯಬೇಕಾದರೆ, 2025-26ನೆ ಸಾಲಿನಲ್ಲಿ ಯಾವುದಾದರೂ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಾಮಾನ್ಯ ಪದವಿ/ ವೃತ್ತಿಪರ ಪದವಿ/ ಇತರ ವಿಷಯಗಳ ಪದವಿ ಅಥವಾ ಡಿಪ್ಲೊಮಾ ಕೋರ್ಸ್‍ಗೆ ಪ್ರವೇಶಾತಿ ಪಡೆದಿರಬೇಕು ಎಂದು ಅವರು ತಿಳಿಸಿದರು.
ಹೆಣ್ಣುಮಕ್ಕಳು ಬಾಲ್ಯ ವಿವಾಹ, ಬಾಲ ಗರ್ಭಿಣಿಯರ ಸಮಸ್ಯೆ, ಪೋಕ್ಸೋ ಸಮಸ್ಯೆಗಳು, ಬಾಲ ಕಾರ್ಮಿಕ ಪದ್ಧತಿಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಮಹಿಳೆಯರು ಸ್ವಾವಲಂಬಿಗಳಾಗಲು ವಿದ್ಯೆ ಅತ್ಯವಶ್ಯ. ನಮ್ಮ ಸರಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತದೆ. ಮಹಿಳೆಯರಿಗೆ ಶಿಕ್ಷಣ ದೊರೆತರೆ, ಸಮಾಜದ ಸವಾಲುಗಳನ್ನು ಎದುರಿಸಲು ಸಮರ್ಥರಾಗುತ್ತಾರೆ ಎಂದು ಅವರು ತಿಳಿಸಿದರು.
ಇದೇ ವೇಳೆ ಉದ್ಯಮಿ ಅಝೀಂ ಪ್ರೇಮ್‍ಜಿ, ಉನ್ನತ ಶಿಕ್ಷಣ ಇಲಾಖೆಯ ಸಚಿವ ಡಾ. ಎಂ.ಸಿ. ಸುಧಾಕರ್ ಸೇರಿದಂತೆ ಮತ್ತಿತರರು ಇದ್ದರು.
ಅಝೀಂ ಪ್ರೇಮ್‍ಜಿಯವರ ಸಾಮಾಜಿಕ ಕಳಕಳಿಯನ್ನು ಅಭಿನಂದಿಸಿದ ಸಿಎಂ
ಅಝೀಂ ಪ್ರೇಮ್‍ಜಿ ಅವರು ತಾವು ಗಳಿಸಿದ ಸಂಪತ್ತನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿರುವುದು ಸ್ವಾಗತಾರ್ಹ. ಕರ್ನಾಟಕದಲ್ಲಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಮೊಟ್ಟೆ ಕೊಡುವ 1,500 ಕೋಟಿ ರೂಪಾಯಿಗಳ ಯೋಜನೆಗೆ ಹಿಂದಿನ ವರ್ಷ ಒಡಂಬಡಿಕೆ ಮಾಡಿಕೊಂಡಿದ್ದೆವು. ಈ ವರ್ಷ ಉನ್ನತ ಶಿಕ್ಷಣಕ್ಕೆ ಬರುವ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ವೇತನದ ರೂಪದಲ್ಲಿ ನೆರವು ನೀಡಲು ಮುಂದೆ ಬಂದಿದ್ದಾರೆ. ಇದು ಸಂತೋಷದ ವಿಷಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದರು.
ದೀಪಿಕಾ ವಿದ್ಯಾರ್ಥಿವೇತನ ಪಡೆಯಲು ಇರಬೇಕಾದ ಅರ್ಹತೆ: 10ನೇ ತರಗತಿಯನ್ನು ಮತ್ತು 12ನೇ ತರಗತಿಯನ್ನು ಸರಕಾರಿ ಶಾಲಾ ಕಾಲೇಜುಗಳಲ್ಲಿ ಪೂರ್ಣಗೊಳಿಸಿ, ಈ ವರ್ಷ, ಎಂದರೆ 2025-26ನೇ ಸಾಲಿನಲ್ಲಿ ಯಾವುದಾದರೂ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಾಮಾನ್ಯ ಪದವಿ/ ವೃತ್ತಿಪರ ಪದವಿ/ ಇತರ ವಿಷಯಗಳ ಪದವಿ ಅಥವಾ ಡಿಪ್ಲೊಮಾ ಕೋರ್ಸ್‍ಗೆ ಪ್ರವೇಶಾತಿ ಪಡೆದಿರಬೇಕು. ಪದವಿ ಕೋರ್ಸ್ ಪೂರ್ಣಗೊಳ್ಳುವವರೆಗೂ ಪ್ರತಿ ವರ್ಷ 30 ಸಾವಿರಗಳನ್ನು ವಿದ್ಯಾರ್ಥಿವೇತನವಾಗಿ ನೀಡಲಾಗುತ್ತದೆ. https://azimpremjifoundation.org/what-we-do/education/azim-premji-scholarship/ ವೆಬ್‍ಸೈಟ್ ಮೂಲಕ ಸೆ.30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.