×
Ad

ಸಿಎಸ್‌ಆರ್‌ ನಿಧಿಯಲ್ಲಿ ಪಬ್ಲಿಕ್ ಶಾಲೆ ನಿರ್ಮಾಣ ವಿಳಂಬ : ಡಿಸಿಎಂ ಡಿ.ಕೆ.ಶಿವಕುಮಾರ್‌ ಅಸಮಾಧಾನ

Update: 2025-05-31 15:04 IST

ಬೆಂಗಳೂರು : ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಸಿಎಸ್‌ಆರ್‌ ಶಾಲೆಗಳ ನಿರ್ಮಾಣ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದಿರುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಶನಿವಾರ ಮುಂದುವರೆದ ರಾಜ್ಯ ಪ್ರಗತಿ ಪರಿಶೀಲನೆ ಕುರಿತ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಸಭೆಯಲ್ಲಿ ಡಿಸಿಎಂ ಅವರು ಅಧಿಕಾರಿಗಳ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪ್ರತಿ ವರ್ಷ 8000 ಕೋಟಿ ರೂ. ಸಿಎಸ್‌ ರ್ ನಿಧಿ ಲಭ್ಯವಿದ್ದು, ಇದನ್ನು ಸಿಎಸ್‌ಆರ್‌ ಶಾಲೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಎಂದು ವರ್ಷದ ಹಿಂದೆಯೇ ಸೂಚನೆ ನೀಡಲಾಗಿತ್ತು. ಆದರೆ ಇದು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ರಾಜ್ಯದ ಕಾರ್ಪೊರೇಟ್ ಸಂಸ್ಥೆಗಳು ಸಿಎಸ್‌ಆರ್‌ ನಿಧಿಯನ್ನು ಅನ್ಯ ರಾಜ್ಯಗಳ ಖಾಸಗಿ ಸೇವಾ ಸಂಸ್ಥೆಗಳಿಗೆ (NGO)ಗಳಿಗೆ ಚೆಕ್ ನಲ್ಲಿ ಕೊಟ್ಟು ಅದರಲ್ಲಿ ಶೇಕಡಾ 50 ರಷ್ಟನ್ನು ನಗದು ಸ್ವರೂಪದಲ್ಲಿ ವಾಪಸ್ಸು ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇದೊಂದು ಅಕ್ರಮ. ಇದರಿಂದ ನಮ್ಮ ರಾಜ್ಯದ ನಿಧಿ ದುರುಪಯೋಗ ಆಗುತ್ತಿದೆ. ಇದನ್ನು ನಮ್ಮ ರಾಜ್ಯದ ಶಾಲೆಗಳ ಅಭಿವೃದ್ಧಿಗೆ ಬಳಸುವುದು ನಿಮ್ಮ ಜವಾಬ್ದಾರಿ ಎಂದು ಹೇಳಿದರು.

ಶಾಲೆ ಕಟ್ಟಿ ಕಾರ್ಪೊರೇಟ್ ಸಂಸ್ಥೆಗಳ ಹೆಸರು ಹಾಕಿಕೊಳ್ಳಲಿ:

ಕಾರ್ಪೊರೇಟ್ ಸಂಸ್ಥೆಗಳು ಸಿಎಸ್‌ಆರ್‌ ನಿಧಿಯನ್ನು ನಮಗೆ ನಗದು ಸ್ವರೂಪದಲ್ಲಿ ಕೊಡುವುದು ಬೇಡ. ಮೂರೂ ಗ್ರಾಮ ಪಂಚಾಯಿತಿಗೆ ಒಂದು ಪಬ್ಲಿಕ್ ಶಾಲೆ ಕಟ್ಟಿಕೊಡಲಿ. ಜಮೀನು ಬೇಕಿದ್ದರೆ ಸರಕಾರದಿಂದಲೇ ಕೊಡೋಣ. ನೀವೇ ಜಾಗ ಗುರುತಿಸಿ. ನಾವು ವಿನ್ಯಾಸ ಕೊಡೋಣ. ಅವರು ಕಟ್ಟಡ ಕಟ್ಟಿ, ಮೂಲಸೌಕರ್ಯ ಒದಗಿಸಲಿ. ಆ ಶಾಲಾ ಕಟ್ಟಡದ ಮೇಲೆ ರಾಜ್ಯ ಸರಕಾರದ ಜತೆಗೆ ಆಯಾ ಸಂಸ್ಥೆಗಳ ಹೆಸರಿನ ಫಲಕ ಹಾಕಿಕೊಳ್ಳಲಿ. ಈ ಶಾಲೆಗಳಿಗೆ ಖಾಸಗಿ ಶಾಲೆಗಳಿಂದ ತಲಾ ಒಬ್ಬರು ನುರಿತ ಶಿಕ್ಷಕರನ್ನು ಪೂರೈಸುವ ಜವಾಬ್ದಾರಿ ವಹಿಸೋಣ ಎಂದರು.

ನನ್ನ ಕ್ಷೇತ್ರದಲ್ಲಿ ತಲಾ 9 ರಿಂದ 12 ಕೋಟಿ ರೂಪಾಯಿವರೆಗೂ ವೆಚ್ಚ ಮಾಡಿ 13 ಸಿಎಸ್‌ಆರ್‌ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಕೆಲವು ಕಡೆ ಮಾತ್ರ ಕೆಲಸ ಆಗುತ್ತಿದೆ. ಬಹುತೇಕ ಕಡೆ ಯಾರೂ ಆಸಕ್ತಿಯನ್ನೇ ವಹಿಸಿಲ್ಲ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

ಪತ್ರ ಬರೆದು, ಸಭೆ ನಡೆಸಲು ಸೂಚನೆ:

ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿನ ಕಾರ್ಪೊರೇಟ್ ಸಂಸ್ಥೆಗಳಿಗೆ ಕೂಡಲೇ ಪತ್ರ ಬರೆದು, ಸಭೆ ಕರೆದು ಪಬ್ಲಿಕ್ ಶಾಲೆಗಳ ನಿರ್ಮಾಣ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿ. ಈವರೆಗೂ ಕಾರ್ಪೊರೇಟ್ ಸಂಸ್ಥೆಗಳು ಏನು ಮಾಡಿವೆ ಎಂಬುದರ ಮಾಹಿತಿ ಪಡೆಯಿರಿ. ಶಿಕ್ಷಣ ಇಲಾಖೆ ವಿನ್ಯಾಸ (ಡಿಸೈನ್) ನೀಡುತ್ತದೆ. ಅದನ್ನು ಆಧರಿಸಿ ಕಟ್ಟಡ ಕಟ್ಟಲು ಸೂಚನೆ ಕೊಡಿ. ಒಂದೊಂದು ತಾಲೂಕಿಗೆ ಒಂದು ಮಾದರಿ ಶಾಲೆ ನಿರ್ಮಿಸಿ, ಅದರ ವಿನ್ಯಾಸದ ಮೇರೆಗೆ ಮೂರು ಪಂಚಾಯಿತಿಗೆ ಒಂದು ಶಾಲೆ ನಿರ್ಮಾಣದ ಗುರಿ ನಿಗದಿ ಮಾಡಿ ಎಂದು ಡಿಸಿ ಹಾಗೂ ಸಿಇಒಗಳಿಗೆ ಸೂಚನೆ ನೀಡಿದರು.

ಶಾಲೆಗಳ ನಿರ್ಮಾಣಕ್ಕೆ ಸಿಎಸ್‌ಆರ್ ನಿಧಿ ಬಳಕೆ ಸಂಬಂಧ ಬೆಂಗಳೂರು ಕಾರ್ಪೊರೇಟ್ ಸಂಸ್ಥೆಗಳ ಸಭೆ ಕರೆಯಲು ಬೆಂಗಳೂರು ಜಿಲ್ಲಾಧಿಕಾರಿ, ಸಿಇಒಗಳಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ ಎಲ್ಲ ಜಿಲ್ಲಾಧಿಕಾರಿಗಳು, ಸಿಇಒಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಸಭೆ ಕರೆದು ಸಿಎಸ್‌ಆರ್ ಶಾಲೆ ನಿರ್ಮಾಣ ತ್ವರಿತಗತಿಯಲ್ಲಿ ಆಗುವಂತೆ ಕ್ರಮ ಕೈಗೊಳ್ಳಬೇಕು. ತಾವೇ ಆಗಾಗ್ಗೆ ಡಿಸಿ ಮತ್ತು ಸಿಇಒಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಯೋಜನೆ ಪ್ರಗತಿ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News