×
Ad

ದಿಲ್ಲಿ ರೈತರ ಪ್ರತಿಭಟನೆ ಕಾಂಗ್ರೆಸ್ ಪೋಷಿತ, ಟೂಲ್‍ಕಿಟ್‍ನ ಭಾಗ: ಆರ್. ಅಶೋಕ್

Update: 2024-02-15 19:42 IST

ಆರ್. ಅಶೋಕ್ 

ಬೆಂಗಳೂರು: ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕಾಂಗ್ರೆಸ್ ಪೋಷಿತವಾಗಿದ್ದು, ಹಿಂದಿನಂತೆಯೇ ಟೂಲ್‍ಕಿಟ್‍ನ ಒಂದು ಭಾಗವಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕೇಂದ್ರ ಸರಕಾರ ಜಾರಿ ಮಾಡಿದ್ದ ಕೃಷಿ ಮಸೂದೆಗಳ ವಿಚಾರದಲ್ಲೂ ಕಾಂಗ್ರೆಸ್ ಇದೇ ಟೂಲ್‍ಕಿಟ್ ತಂತ್ರವನ್ನು ಅನುಸರಿಸಿತ್ತು. ಹಿಂದಿನ ಯುಪಿಎ ಸರಕಾರಕ್ಕಿಂತ ಹೆಚ್ಚು ನೆರವನ್ನು ರೈತರಿಗೆ ಪ್ರಧಾನಿ ಮೋದಿ ನೀಡಿದ್ದಾರೆ. ಕಾಂಗ್ರೆಸ್ ಸರಕಾರ ಹಿಂದಿನ ಬಿಜೆಪಿ ಸರಕಾರ ತಂದಿದ್ದ ರೈತ ಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ರೈತ ವಿರೋಧಿ ಮನೋಭಾವದ ಕಾಂಗ್ರೆಸ್ ಈಗ ಪ್ರತಿಭಟನೆಯ ನಾಟಕ ಶುರು ಮಾಡಿದೆ ಎಂದು ದೂರಿದರು.

‘ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಗ್ಯಾರಂಟಿ ನೀಡುತ್ತೇವೆಂದು ಕಾಂಗ್ರೆಸ್ ಬುರುಡೆ ಬಿಟ್ಟಿದೆ. 2010ರಲ್ಲಿ ತಮ್ಮದೇ ಯುಪಿಎ ಸರಕಾರ ಇದ್ದಾಗ ಡಾ.ಸ್ವಾಮಿನಾಥನ್ ಅವರು ಕನಿಷ್ಠ ಬೆಂಬಲ ಬೆಲೆ ಬಗ್ಗೆ ನೀಡಿದ್ದ ವರದಿಯನ್ನು ಸಾರಾಸಗಟಾಗಿ ತಿರಸ್ಕಾರ ಮಾಡಿತ್ತು ಎಂದು ಆರ್.ಅಶೋಕ್ ಆರೋಪಿಸಿದರು.

ಲೋಕಸಭೆ ಚುನಾವಣೆಯಲ್ಲಿ ಸೋಲುವುದು ಗ್ಯಾರಂಟಿ ಎಂದು ಕಾಂಗ್ರೆಸ್ ನಿಶ್ಚಯ ಮಾಡಿಕೊಂಡಿದೆ. ಹೇಗಿದ್ದರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ರಾಹುಲ್ ಗಾಂಧಿ ಮತ್ತಿತರ ಕಾಂಗ್ರೆಸ್ ನಾಯಕರು ಬೇಕಾಬಿಟ್ಟಿ ಹೇಳಿಕೆ ನೀಡುವ ಮೂಲಕ ರೈತರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ರೈತರ ಆದಾಯ ಹೆಚ್ಚಿಸಲು, ಅನ್ನದಾತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿಸಲು ಯಾರಾದರೂ ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದರೆ ಅದು ಪ್ರಧಾನಿ ಮೋದಿ ಸರಕಾರ ಮಾತ್ರ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News