×
Ad

ಸರಕಾರಿ ಕಚೇರಿ, ಶಾಲಾ-ಕಾಲೇಜು, ವಿವಿಗಳಲ್ಲಿ ‘ಧಾರ್ಮಿಕ ಪೂಜೆ, ದೇವರ ಪೋಟೋ ಪ್ರದರ್ಶನ’ ನಿಷೇಧಿಸಲು ಆಗ್ರಹ

Update: 2024-09-09 21:16 IST

ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

ಬೆಂಗಳೂರು: ಸಂವಿಧಾನದಲ್ಲಿ ಮೌಲ್ಯಗಳನ್ನು ಸಂರಕ್ಷಿಸುವ ಮೊದಲ ಹೆಜ್ಜೆಯಾಗಿ, ರಾಜ್ಯದ ಎಲ್ಲ ಸರಕಾರಿ ಕಚೆರಿ ಮತ್ತು ಶಾಲಾ-ಕಾಲೇಜು, ವಿಶ್ವ ವಿದ್ಯಾನಿಲಯಗಳಲ್ಲಿ ಧಾರ್ಮಿಕ ಪೂಜೆ, ದೇವರ ಫೋಟೋಗಳು ಅಥವಾ ಧಾರ್ಮಿಕ ಘೋಷಣೆಗಳ ಪ್ರದರ್ಶನವನ್ನು ನಿಷೇಧಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ತಜ್ಞರು, ಸಾಹಿತಿ, ಜನಪರ ಹೋರಾಟಗಾರರು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಸೋಮವಾರ ಶಿಕ್ಷಣ ತಜ್ಞ ಪ್ರೊ.ವಿ.ಪಿ.ನಿರಂಜನಾರಾಧ್ಯ, ಲೇಖಕರಾದ ಬಸವರಾಜ ಸೂಳಿಭಾವಿ, ಡಾ. ಮೂಡ್ನಾಕೂಡ ಚಿನ್ನಸ್ವಾಮಿ, ರಂಜಾನ ದರ್ಗಾ, ಕೆ.ಶ್ರೀನಾಥ, ಆರ್.ಎಚ್.ನಟರಾಜ, ನಿರ್ದೇಶಕ ಬಿ. ಸುರೇಶ, ಶ್ರೀಪಾದ ಭಟ್, ಲೇಖಕಿ ಡಾ.ಎಚ್.ಎಸ್.ಅನುಪಮಾ ಕವಲಕ್ಕಿ, ಅಂಕಣಕಾರ ಶಿವಸುಂದರ್, ಹಿರಿಯ ಪತ್ರಕರ್ತ ಸನತಕುಮಾರ ಬೆಳಗಲಿ, ಡಾ.ಜಿ.ವಿ.ಆನಂದ ಮೂರ್ತಿ, ಡಾ.ಸಬಿಹಾ ಭೂಮಿಗೌಡ ಸೇರಿದಂತೆ ಹಲವು ಮಂದಿ ಸರಕಾರಕ್ಕೆ ಪತ್ರ ಬರೆದಿದ್ದಾರೆ.

‘ಸಂವಿಧಾನದ ಅನುಚ್ಛೇದ 25 ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಖಾತರಿಪಡಿಸುತ್ತದೆ. ಇದು ಧರ್ಮವನ್ನು ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಒಳಗೊಂಡಿದೆ. ಈ ಅನುಚ್ಛೇದದ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ವಿಧಿಸಲಾದ ಸಮಂಜಸವಾದ ನಿಬರ್ಂಧಗಳಿಗೆ ಒಳಪಟ್ಟಿರುತ್ತದೆ. ಇದರರ್ಥ ವ್ಯಕ್ತಿಗಳು ತಮ್ಮ ಧರ್ಮವನ್ನು ಆಚರಿಸುವ ಹಕ್ಕನ್ನು ಹೊಂದಿದ್ದರೂ, ಅದು ಸಮಾಜದ ಸಾಮರಸ್ಯವನ್ನು ಭಂಗಗೊಳಿಸಬಾರದು ಅಥವಾ ಇತರರ ಶಾಂತಿ-ಸಾಮರಸ್ಯವನ್ನು ಉಲ್ಲಂಘಿಸಬಾರದು ಎಂದು ತಿಳಿಸಿದ್ದಾರೆ.

ಸಂವಿಧಾನದ ಈ ಹಕ್ಕು ವೈಯುಕ್ತಿಕ ನೆಲೆಯಲ್ಲಿ ಮೂಲಭೂತ ಹಕ್ಕಾಗಿದ್ದು, ವ್ಯಕ್ತಿಗಳು ತಮ್ಮ-ತಮ್ಮ ಮನೆಯಲ್ಲಿ ಅಥವಾ ಕುಟುಂಬದಲ್ಲಿ ಅಥವಾ ತಮ್ಮ ಖಾಸಗಿ ಸ್ಥಳಗಳಲ್ಲಿ ಧಾರ್ಮಿಕ ಆಚರಣೆ ಮತ್ತು ದೇವರ ಪೂಜೆಯನ್ನು ಮಾಡಿಕೊಳ್ಳುವ ಮೂಲಕ ತಮ್ಮ ಮೂಲಭೂತ ಹಕ್ಕನ್ನು ಅನುಭವಿಸಲು ಸ್ವತಂತ್ರರಿದ್ದಾರೆ. ಆದರೆ, ಸರಕಾರಿ ಕಚೇರಿಗಳಲ್ಲಿ, ಶಾಲೆ-ಕಾಲೇಜು, ವಿವಿಗಳಲ್ಲಿ ಅಥವಾ ಇತರೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ದೇವರ ಪ್ರತಿಮೆಯನ್ನು ಸ್ಥಾಪಿಸಿ ಪೂಜಿಸುವುದು ಸಂವಿಧಾನದ ಮತಧರ್ಮ ನಿರಪೇಕ್ಷ ತತ್ವಕ್ಕೆ ವಿರುದ್ಧವಾಗಿದ್ದು ಸಂವಿಧಾನದ ಆಶಯಕ್ಕೆ ವಿರುದ್ಧವಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಮ್ಮ ಕಚೇರಿಯಲ್ಲಿ ಗಣೇಶ ಪ್ರತಿಮೆ ಸ್ಥಾಪಿಸಿ ಪೂಜಿಸಿದ ನಡೆ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವಂತಹದ್ದಾಗಿದೆ. ಅವರ ಸದುದ್ದೇಶ ಏನೇ ಇದ್ದರೂ, ಸರಕಾರಿ ಕಚೇರಿಗಳು ಮತಧರ್ಮಗಳ ಆಚರಣೆ ಹಾಗು ಪೂಜೆಯ ಕೇಂದ್ರಗಳಲ್ಲ. ಅಲ್ಲಿ ಒಂದು ನಿರ್ದಿಷ್ಟ ಧರ್ಮದ ದೇವರ ಪ್ರತಿಮೆಗಳನ್ನು ಸ್ಥಾಪಿಸುವುದು ಭಾರತದ ಮತಧರ್ಮ ನಿರಪೇಕ್ಷ ರೂಪಿ ಜಾತ್ಯತೀತ(ಸೆಕ್ಯುಲಾರ್) ಆಶಯಗಳಿಗೆ ಭಂಗ ತರುತ್ತದೆ ಎಂದು ತಿಳಿಸಲಾಗಿದೆ.

ಒಬ್ಬ ಸರಕಾರಿ ಅಧಿಕಾರಿ ಅಥವಾ ನೌಕರ ಸರಕಾರಿ ಕಚೇರಿಯಲ್ಲಿ ಒಂದು ನಿರ್ಧಿಷ್ಟ ಧರ್ಮದ ಪ್ರತಿಮೆ ಸ್ಥಾಪಿಸುವುದು ಸಂವಿಧಾನದ ಬಹುಧರ್ಮೀಯ ಮತ್ತು ಬಹುಸಂಸ್ಕೃತಿಯ ತತ್ವಕ್ಕೆ ವಿರುದ್ಧವಾಗಿದ್ದು ಎಲ್ಲ ಭಾರತೀಯರು ಹಿಂದೂಗಳೇ ಎಂಬ ಹಿಂದೂತ್ವವಾದಿಗಳ ಪ್ರಚಾರಕ್ಕೆ ಅಧಿಕೃತ ಮಾನ್ಯತೆ ತಂದುಕೊಂಡುತ್ತದೆ. ಈ ಎಲ್ಲ ಕಾರಣದಿಂದ, ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್‍ರ ನಡೆ ಸದುದ್ದೇಶವೇ ಆಗಿದ್ದರೂ, ದೇಶದ ಸಂವಿಧಾನಕ್ಕೆ ವಿರುದ್ಧವಾಗಿದ್ದು ಅದು ಖಂಡನೀಯ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News