×
Ad

ಕೋಗಿಲು ಬಳಿ ಅನಧಿಕೃತ ಮನೆಗಳ ನೆಲಸಮ; ಸ್ಥಳಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಭೇಟಿ

Update: 2025-12-29 17:49 IST

ಕೋಗಿಲು ಬಳಿ ಅನಧಿಕೃತ ಮನೆಗಳ ನೆಲಸಮ

ಬೆಂಗಳೂರು : ಕೋಗಿಲು ಬಳಿ ನಿರ್ಮಾಣಗೊಂಡಿದ್ದ ಅನಧಿಕೃತ ಮನೆಗಳನ್ನು ನೆಲಸಮಗೊಳಿಸಿದ ಸ್ಥಳಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಸೋಮವಾರ ಭೇಟಿ ನೀಡಿ, ಸ್ಥಳೀಯರೊಂದಿಗೆ ಚರ್ಚೆ ನಡೆಸಿ ಅಹವಾಲುಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ಯಾಮ್ ಭಟ್ ಅವರು, ಘಟನೆ ಕುರಿತು ಮಾನವ ಹಕ್ಕುಗಳ ಆಯೋಗದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಮನೆಗಳನ್ನು ತೆರವು ಮಾಡಿರುವ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದಿಂದ ವರದಿ ಕೇಳಿದ್ದೇವೆ ಎಂದು ಹೇಳಿದರು.

ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿರುವ ಪೊಲೀಸ್ ಘಟಕದ ಎಡಿಜಿಪಿ ನೇತೃತ್ವದಲ್ಲಿ ಇಲ್ಲಿನ ಪರಿಸ್ಥಿತಿ ಕುರಿತು ತನಿಖೆ ಮಾಡುತ್ತೇವೆ. ಸ್ಥಳೀಯರಿಂದ ದಾಖಲಾತಿ ಪಡೆದು, ಅವುಗಳ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಸಲಾಗುವುದು. ತನಿಖೆ ಪೂರ್ಣಗೊಂಡ ನಂತರ ಸರಕಾರಕ್ಕೆ ಶಿಫಾರಸುಗಳನ್ನು ಮಾಡುತ್ತೇವೆ ಎಂದು ಅವರು ಹೇಳಿದರು.

ಮನೆಗಳನ್ನು ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕಾಳಜಿ ಕೇಂದ್ರಗಳು ತುಂಬಾ ದೂರದ ಪ್ರದೇಶದಲ್ಲಿ ಇದೆ ಎಂದು ಸ್ಥಳೀಯರು ದೂರುತಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ಮಾಡುತ್ತೇವೆ. ಪೊಲೀಸರು ತನಿಖೆಗೆ ಬಂದಾಗ ನಿಮ್ಮ ಬಳಿ ಇರುವ ದಾಖಲೆಗಳನ್ನು ಅವರಿಗೆ ನೀಡುವಂತೆ ಇಲ್ಲಿರುವವರಿಗೆ ಸೂಚನೆ ನೀಡಿದ್ದೇನೆ ಎಂದು ಶ್ಯಾಮ್ ಭಟ್ ಹೇಳಿದರು.

ರಾಜೀವ್ ಗಾಂಧಿ ವಸತಿ ನಿಗಮದಿಂದ ಸರ್ವೆ: ಫಕೀರ್ ಲೇಔಟ್ ಹಾಗೂ ವಸೀಮ್ ಲೇಔಟ್‍ನಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಸರ್ವೆ ಕಾರ್ಯ ಆರಂಭಿಸಿದ್ದು, ಮನೆಗಳನ್ನು ಕಳೆದುಕೊಂಡಿರುವವರ ಬಳಿ ಇರುವ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ನೀಡಿರುವ ತಾತ್ಕಾಲಿಕ ಹಕ್ಕುಪತ್ರ, ವಿದ್ಯುತ್ ಬಿಲ್, ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಸ್ಥಳೀಯರು ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News