ಅವಹೇಳನಕಾರಿ ಮಾತನಾಡಿದರೆ ಸೂಲಿಬೆಲೆ ಮಾತ್ರವಲ್ಲ, ಎಲ್ಲರ ವಿರುದ್ಧ ಕ್ರಮ: ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ
Update: 2023-08-28 19:55 IST
ಬೆಂಗಳೂರು, ಆ.28:ಅವಹೇಳನಕಾರಿಯಾಗಿ ಮಾತನಾಡಿದರೆ ಯುವ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ ಮಾತ್ರವಲ್ಲ, ಎಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಡಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಪ್ರಕ್ರಿಯೆ ಆರಂಭಿಸಿದ್ದಾರೆ. ಹೀಗೆ, ಯಾರೇ ತಪ್ಪು ಮಾಡಿದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾರ್ವಜನಿಕವಾಗಿ ಅವಹೇಳನ ಮಾಡಿದರೆ, ಕೆಟ್ಟದಾಗಿ ಮಾತನಾಡಿದರೆ ಚಕ್ರವರ್ತಿ ಸೂಲಿಬೆಲೆ ಮಾತ್ರವಲ್ಲ ಪ್ರತಿಯೊಬ್ಬರ ವಿರುದ್ಧವೂ ಎಫ್‍ಐಆರ್ ದಾಖಲಿಸಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಆದರೆ, ಯಾರನ್ನು ಗುರಿಯಾಗಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.